
ವಿರಾಜಪೇಟೆ ಜ.25 NEWS DESK : ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟ ಯೋಜನೆ ಜಾರಿಗೆ ಬಂದು 24 ವರ್ಷ ಕಳೆದರು ಬಿಸಿ ಊಟ ಯೋಜನೆ ಕಾರ್ಯಕರ್ತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೇತನ ಹೆಚ್ಚಿಸಿಲ್ಲವೆಂದು ಸಿ.ಐ.ಟಿ.ಯು. ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಐಟಿಯು ಸಂಘಟನೆಯ ರಾಜ್ಯ ಸಮಿತಿ ಮತ್ತು ಕೊಡಗು ಜಿಲ್ಲಾ ಸಮಿತಿಯ ಜಂಟಿ ಆಶ್ರಯದಲ್ಲಿ ವಿರಾಜಪೇಟೆ ನಗರ ಶಾಖೆಯಲ್ಲಿ ಬಿಸಿ ಊಟ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮಾ.3 ಮತ್ತು 4 ರಂದು ಬಂದ್ ನಡೆಸಲಾಗುತ್ತದೆಂದು ತಿಳಿಸಿದರು. 2014ರ ನಂತರ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಪರಿಕಲ್ಪನೆ ಬದಲಾಗಿ, ನೀತಿ ಆಯೋಗದ ಶಿಫಾರಸ್ಸಿನಂತೆ 60:40 ಅನುಪಾತದ ಆಧಾರದಲ್ಲಿ ಕೇಂದ್ರ ಸರ್ಕಾರ ತನ್ನ ಮೂಲ ಜವಾಬ್ದಾರಿ ಮರೆತು ನುಣುಚಿಕೊಂಡಿದೆ. ರಾಜ್ಯದಲ್ಲಿ ನೂತನ ಸರ್ಕಾರ ರಚನೆಯ ಆರಂಭದಲ್ಲಿ ವೇತನ ಹೆಚ್ಚಳದ ಭರವಸೆ ನೀಡಿತ್ತಾದರು ಇಂದಿನವರೆಗೂ ಜಾರಿಯಾಗಿಲ್ಲವೆಂದು ಆರೋಪಿಸಿದರು. ಸಿ.ಐ.ಟಿ.ಯು. ಸಂಘಟನೆಯ ರಾಜ್ಯ ಖಜಾಂಚಿಗಳಾದ ಮಹಾದೇವಮ್ಮ, ಬಿಸಿ ಊಟ ನೌಕರರಿಗೆ ಯಾವುದೇ ವೈದ್ಯಕೀಯ ಸೌಲಭ್ಯಗಳಿಲ್ಲ. ವಿಮಾ ಸೌಲಭ್ಯಗಳು ಇಲ್ಲದಾಗಿದೆಯೆಂದು ಆರೋಪಿಸಿ, ಉತ್ತರಪ್ರದೇಶ ಮತ್ತು ಪಂಜಾಬ್ ರಾಜ್ಯದ ಹೈಕೋರ್ಟ್ ತೀರ್ಮಾನಿಸಿದಂತೆ ವರ್ಷದ 12 ತಿಂಗಳು ಕೆಲಸ ಮತ್ತು ಕನಿಷ್ಟ ಕೂಲಿ ಜಾರಿ ಮಾಡಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎ.ಸಿ.ಸಾಬು, ಕುಸುಮಾ, ತಾ.ಅಧ್ಯಕ್ಕೆ ಜಯಂತಿ, ರೂಪ ಉಪಸ್ಥಿತರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ









