
ಮಡಿಕೇರಿ ಜ.25 NEWS DESK : ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜ.26 ರಂದು ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ ಉದ್ಘಾಟನಾ ಸಮಾರಂಭ ಹಾಗೂ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ನಗರದ ಪೊಲೀಸ್ ಮೈದಾನದಲ್ಲಿ ಸಂಜೆ 5.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಯ ಮಹಾ ಪೋಷಕರಾದ ಕೆ.ರಾಮರಾಜನ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಕೆ.ಎಸ್.ಸುಂದರ್ ರಾಜ್ ವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಖ್ಯಾತ ಬಹುಭಾಷಾ ನಟಿ ಹರ್ಷಿಕಾ ಪೂಣಚ್ಚ ಉಳ್ಳಿಯಡ, ಉದಯೋನ್ಮುಖ ನಟಿ ಎಸ್.ಪಿ.ತೇಜಸ್ವಿನಿ ಶರ್ಮ, ಮುಖ್ಯ ಅತಿಥಿಗಳಾಗಿ ಶಕ್ತಿ ದಿನಪತ್ರಿಕೆಯ ಸಂಪಾದಕರು ಹಾಗೂ ಕಲಾ ಪೋಷಕ ಜಿ.ಚಿದ್ವಿಲಾಸ್, ಸಂಯುಕ್ತ ಕರಾವಳಿ ಸಾಂಸ್ಕೃತಿಕ ಅಧ್ಯಕ್ಷರು ಹಾಗೂ ಶೇಡ್ಸ್ ಇವೆಂಟ್ಸ್ ಮತ್ತು ನೆಟ್‍ವಕ್ರ್ಸ್ ಮಾಲೀಕ ಕೆ.ಕೆ.ನೌಶಾದ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೇಶವ ಕನಿಲ, ಜೀ ಕನ್ನಡ ಸರಿಗಮಪ ಸ್ಪರ್ಧಿಗಳ ಮುಖ್ಯಸ್ಥ ಸಚಿನ್ ಪ್ರಕಾಶ್ ಕಂದನಕೋಡಿ ಪಾಲ್ಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಛದ್ಮವೇಷ ಕಲಾವಿದ, ನಿವೃತ್ತ ಎ.ಎಸ್.ಐ ಪಾರ್ಥ ಹಾಗೂ ಕಲಾವಿದ, ಹೆಚ್.ಸಿ.(ನಿಸ್ತಂತು) ಈ.ಯು.ವಿಜಯ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ಜೀ ಕನ್ನಡ ಸರಿಗಮಪ ಖ್ಯಾತಿಯ ಚನ್ನಪ್ಪ ಹುದ್ದರ್, ಸುಬ್ರಮಣ್ಯ, ಪ್ರಗತಿ ಬಡಿಗೇರ್, ಅನ್ವಿತ್ ಕುಮಾರ್, ಕೊಡಗಿನ ಖ್ಯಾತ ಗಾಯಕ ಚಕ್ಕೆರ ಪಂಚಮ್ ಬೋಪಣ್ಣ, ಉದಯೋನ್ಮುಖ ಗಾಯಕಿ ಬಟ್ಟಿಯಂಡ ಲಿಖಿತ, ಖ್ಯಾತ ನಿರೂಪಕಿ ಮೊನಿಷಾ ಅವರಿಂದ ಸಂಗೀತ ಸಂಜೆ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ, ಸ್ಥಳೀಯ ಡ್ಯಾನ್ಸ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೊಡಗು ಪೊಲೀಸ್ ಇಲಾಖೆ ಮನವಿ ಮಾಡಿದೆ.










