ಪುತ್ತೂರು ಜ.27 NEWS DESK : ಪ್ರಜೆಗಳಿಗೆ ಸಮಾನ ಅಧಿಕಾರವನ್ನು ನೀಡುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ವಿಶ್ವದಲ್ಲಿಯೇ ಅತಿ ಶ್ರೇಷ್ಟವಾದದ್ದು, ಆದರೆ ನೆರೆ ರಾಷ್ಟ್ರಗಳಿಂದ ಮತ್ತು ದೇಶದ ರಾಜಕೀಯ ಮೇಲಾಟಗಳಿಂದ ಈ ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಉಂಟಾಗಿದ್ದು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ನಾವು ಹೆಣಗಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತಾಡಿದರು. ಭದ್ರತೆಗೆ ಒತ್ತುಕೊಟ್ಟು ರಾಷ್ಟ್ರ ರಕ್ಷಣೆ ಮಾಡುವ ಸುಭದ್ರ ಸರ್ಕಾರವನ್ನು ಆರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ಸಂಭ್ರಮದಿಂದ ಆಚರಿಸಬೇಕಾದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಗಳು ರಜಾ ದಿನಗಳಾಗುತ್ತಿರುವುದು ದುರಂತ. ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳು ಮಾತ್ರ ಇದನ್ನು ಆಚರಿಸುವಂತಾದುದು ವಿಪರ್ಯಾಸ ಎಂದರು. ಈ ಬಗ್ಗೆ ಜಾಗೃತಿಯನ್ನು ಉಂಟುಮಾಡಿ ಸಾಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಮಾಡುತ್ತಾ ರಾಷ್ಟ್ರ ರಕ್ಷಣೆಗೆ ಕಟಿಬದ್ದರಾಗಬೇಕೆಂದು ಅವರು ಹೇಳಿದರು. ಕಾರ್ಯಕ್ರಮ ಸಂಯೋಜಕ ಬಾಲಚಂದ್ರ ಗೌಡ ಭಾರ್ತಿಕುಮೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಭಾಗ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ವಿದ್ಯಾರ್ಥಿಗಳಾದ ಸಾತ್ವಿಕ್, ಅನೂಷಾ ಪ್ರಾರ್ಥಿಸಿದರು. ಹಿರಿಯ ಪ್ರಯೋಗಾಲಯ ಬೋಧಕ ಹರಿಪ್ರಸಾದ್.ಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.