
ಮಡಿಕೇರಿ ಜ.27 NEWS DESK : ಮಡಿಕೇರಿ ತಾಲ್ಲೂಕು ಸವಿತಾ ಸಮಾಜದ ವತಿಯಿಂದ ಫೆ.4 ರಂದು ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟ ಮತ್ತು ರಕ್ತದಾನ ಶಿಬಿರ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಎಂ.ಟಿ.ಮಧು ಈ ಕುರಿತು ಮಾಹಿತಿ ನೀಡಿ, ಸಮಾಜ ಬಾಂಧವರಿಗಾಗಿ ಅಂದು ಕ್ರೀಡಾಕೂಟ ಆಯೋಜಿತವಾಗಿದೆ. ಇದೇ ಸಂದರ್ಭ ‘ಪ್ರತಿಯೊಬ್ಬ ರಕ್ತದಾನಿ ಹೀರೋ’ ಎನ್ನುವ ಘೋಷ ವಾಕ್ಯದೊಂದಿಗೆ ರಕ್ತದಾನ ಶಿಬಿರ ನಡೆಯಲಿದ್ದು, ಇದರಲ್ಲಿ ಜಾತಿ ಮತಗಳ ಭೇದವಿಲ್ಲದೆ ಯಾರು ಬೇಕಾದರು ಪಾಲ್ಗೊಳ್ಳಬಹುದಾಗಿದ್ದು, ಸಂಘ ಸಂಸ್ಥೆಗಳು ಅಗತ್ಯ ಸಹಕಾರ ನಿಡುವಂತೆ ಮನವಿ ಮಾಡಿದರು. ಸಮಾಜದ ಕ್ರೀಡಾ ಅಧ್ಯಕ್ಷ ಮಧು ಚೆಟ್ಟಿಮಾನಿ ಅವರು ಮಾತನಾಡಿ, ಅಂದು ತಾಲ್ಲೂಕು ಮಟ್ಟದ ಸೂಪರ್ 9 ಕ್ರಿಕೆಟ್ ಪಂದ್ಯಾವಳಿಯನ್ನು ಯೋಜಿಸಲಾಗಿದೆ. ಪಂದ್ಯಾವಳಿಗೂ ಮುನ್ನ ಕೊಡಗು ಪತ್ರಕರ್ತರ ತಂಡ ಹಾಗೂ ಸವಿತಾ ಸಮಾಜ ತಂಡದ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ಇದೇ ಮೊದಲ ಬಾರಿಗೆ ಮಹಿಳೆಯರಿಗೂ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು. ಕ್ರೀಡಾಕೂಟದಲ್ಲಿ ಮಹಿಳೆಯರು ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ, ಗುರಿಗೆ ಫುಟ್ಬಾಲ್ ಒದೆಯುವ ‘ಪೆನಾಲ್ಟಿ ಶೂಟೌಟ್’ ಪಂದ್ಯ, ಏರ್‍ಗನ್ ಶೂಟಿಂಗ್ ಸ್ಪರ್ಧೆ ಮತ್ತು ಸಮಾಜ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದಾಗಿ ತಿಳಿಸಿದರು.
ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಡಾ.ಮಂತರ್ ಗೌಡ, ಹಿರಿಯ ಪತ್ರಕರ್ತ ಅನಿಲ್ ಹೆಚ್.ಟಿ., ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಉದ್ಯಮಿ ಓಂ ಪ್ರಕಾಶ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ದೊರೇಶ್ ಕೆ.ಎಸ್. ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಇದರಲ್ಲಿ ಕಾರ್ಮಿಕ ಅಧಿಕಾರಿ ಮುನಿಯಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ಸವಿತಾ ಸಮಾಜದ ವೃತ್ತಿ ಬಾಂಧವರಿಗೆ ‘ಸ್ಮಾರ್ಟ್ ಕಾರ್ಡ್’ ವಿತರಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲ್ಲೂಕು ಸವಿತಾ ಸಮಾಜದ ಕಾರ್ಯದರ್ಶಿ ಎಂ.ಜಿ.ಚರಣ್, ನಗರಾಧ್ಯಕ್ಷ ಟಿ.ಜಿ.ಸಂದೇಶ್, ಉಪಾಧ್ಯಕ್ಷ ಹೆಚ್.ಎ.ಕಿರಣ್ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾದ ಆರ್.ಬಿ.ವಸಂತಿ ಉಪಸ್ಥಿತರಿದ್ದರು.









