ಮಡಿಕೇರಿ ಜ.28 NEWS DESK : ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ, ಕಥೆಗಾರ್ತಿ ಕೆ.ಜಲಯಕ್ಷ್ಮಿ ಅವರ ‘ಮತ್ತೆ ವಸಂತ’ ಕಥಾ ಸಂಕಲನವು ನಗರದ ‘ರೆಡ್ ಬ್ರಿಕ್ಸ್ ಇನ್ ‘ಸತ್ಕಾರ್’ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು. ಕಾರ್ಯಕ್ರಮವನ್ನು ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ಕೃತಿ ಲೋಕಾರ್ಪಣೆ ಮಾಡಿ, ಕೊಡಗು ಸಾಹಿತ್ಯ ಚರಿತ್ರೆ ಹಾಗೂ ಪ್ರಸ್ತುತ ಕೊಡಗಿನ ಸಾಹಿತ್ಯದ ಸ್ಥಿತಿಗತಿ ಕುರಿತು ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಬೆಳ್ತಂಗಡಿಯ ಎನ್.ಜಯಶಂಕರ್ ಶರ್ಮ ಹಾಗೂ ಶಕ್ತಿ ದಿನಪತ್ರಿಕೆಯ ಸಂಪಾದಕ ಚಿದ್ವಿಲಾಸ್ ಭಾಗವಹಿಸಿ ಮಾತನಾಡಿದರು. 32 ಸಣ್ಣ ಕಥೆಗಳನ್ನು ಹೊಂದಿರುವ ‘ಮತ್ತೆ ವಸಂತ ಕೃತಿ ಪರಿಚಯವನ್ನು ಮಡಿಕೇರಿ ತಾಲ್ಲೂಕು ಜನಪದ ಪರಿಷತ್ ಅಧ್ಯಕ್ಷ, ಪತ್ರಕರ್ತ ಅನಿಲ್ ಹೆಚ್.ಟಿ ಸಂಕ್ಷಿಪ್ತವಾಗಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಕೊಡಗಿನಲ್ಲಿ ಗಮನಾರ್ಹವಾಗಿ ಹೆಚ್ಚುತ್ತಿರುವ ಮಹಿಳಾ ಲೇಖಕಿಯರ ಕುರಿತು ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಜಿಲ್ಲಾ ಜನಪದ ಪರಿಷತ್ ಅಧ್ಯಕ್ಷ ಜಿ.ಜಿ ಅನಂತಶಯನ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಮೇ.ಡಾ.ಬಿ.ರಾಘವ, ವಿರಾಜಪೇಟೆ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಕೂಡಕಂಡಿ ದಯಾನಂದ, ಲೇಖಕ ಡಾ.ಸೂರ್ಯಕುಮಾರ್, ಲೇಖಕಿ ಸಹನಾ ಕಾಂತಬೈಲು, ಸಂಗೀತ ರವಿರಾಜ್, ಓಂಶ್ರೀ, ಪ್ರತಿಮಾ ರೈ, ಪತ್ರಕರ್ತ, ಬರಹಗಾರ ರಂಜಿತ್ ಕವಲಪಾರ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.