ಮಡಿಕೇರಿ ಜ.28 NEWS DESK : ಮಡಿಕೇರಿ ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಉದ್ಯಾನವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡುವಂತೆ ಕೊಡಗು ಜಿಲ್ಲಾ ಅಹಿಂದ ಸಂಘಟನೆ ಮನವಿ ಮಾಡಿದೆ. ಮಡಿಕೇರಿ ನಗರಸಭಾ ಪೌರಯುಕ್ತ ರಮೇಶ್ ಅವರಿಗೆ ಮನವಿ ಸಲ್ಲಿಸಿದ ಸಂಘಟನೆಯ ಪ್ರಮುಖರು ಹಾಗೂ ಪದಾಧಿಕಾರಿಗಳು ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಉದ್ಯಾನವನದಲ್ಲಿ (ಇಂದಿರಾ ಕ್ಯಾಂಟೀನ್ ಬಳಿಯಲ್ಲಿ) ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡುವಂತೆ ಹಾಗೂ ಇಂದಿರಾ ಕ್ಯಾಂಟೀನ್ ಬಳಿ ಹೆಚ್ಚು ಸ್ಥಳಾವಕಾಶ ಇರುವುದರಿಂದ ಭಾರತದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ಪುತ್ತಳಿ ನಿರ್ಮಾಣ ಮಾಡುವಂತೆ ಮನವಿ ಮಾಡಿದರು. ಈ ಸ್ಥಳದಲ್ಲಿ ಪಕ್ಷೇಪಣೆಗಳಿದ್ದಲ್ಲಿ ನಗರದ ಹೃದಯ ಭಾಗವಾದ ಹಳೆಯ ಖಾಸಗಿ ಬಸ್ ನಿಲ್ದಾಣದ ತಡೆಗೋಡೆ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನ ಗ್ರಂಥಾಲಯವನ್ನು ನಿರ್ಮಿಸುವಂತೆ ಆಗ್ರಹಿಸಿದರು. ಈ ಸಂದರ್ಭ ಸಮಿತಿಯ ಅಧ್ಯಕ್ಷ ರವಿಗೌಡ, ನಗರಸಭಾ ಸದಸ್ಯ ಬಶೀರ್ ಅಹಮದ್, ಪ್ರಮುಖರಾದ ವಿನೋದ್ ಕುಮಾರ್, ಮುನೀರ್ ಮಾಚರ್, ಎಂ.ಎ.ಜಹೀರ್, ಹೆಚ್.ಜಿ.ಹರೀಶ್ ಸೇರಿದಂತೆ ಮತ್ತಿತರ ಪ್ರಮುಖರು ಹಾಜರಿದ್ದರು.