ಮಡಿಕೇರಿ ಜ.29 NEWS DESK : ಇವತ್ತು ಬರೆದು ನಾಳೆ ಅಳಿದು ಹೋಗುವ ಕೃತಿಗಳನ್ನು ಬರೆಯದಿರಿ. ಅಧ್ಯಯನ ಉಸಿರಾಗಿ ಆಳವಾದ ಮತ್ತು ವಿಸ್ತ್ರತವಾದ ಓದನ್ನು ಮೈಗೂಡಿಸಿಕೊಂಡು ಹೆಚ್ಚಿನ ಕಾಲ ಮನದಲ್ಲಿ ಉಳಿಯುವ ಕೃತಿ ರಚನೆಯತ್ತ ಲೇಖಕರು ಗಮನ ಹರಿಸಬೇಕೆಂದು ಮಡಿಕೇರಿ ಆಕಾಶವಾಣಿ ಕೇಂದ್ರದ ಹಿರಿಯ ಉದ್ಘೋಷಕ, ಸಾಹಿತಿ ಸುಬ್ರಾಯ ಸಂಪಾಜೆ ಕಿವಿಮಾತು ಹೇಳಿದ್ದಾರೆ. ಮಡಿಕೇರಿ ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಕೆ.ಜಯಲಕ್ಷ್ಮಿ ಅವರ ‘ಮತ್ತೆ ವಸಂತ’ ಕಥಾ ಸಂಕಲನವನ್ನು ನಗರದ ರೆಡ್ ಬ್ರಿಕ್ಸ್ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಂಪರೆಯ ವಿಶೇಷತೆಗಳನ್ನು ಸೋದಾಹರಣವಾಗಿ ವಿವರಿಸಿದ ಸುಬ್ರಾಯಸಂಪಾಜೆ, ಕನ್ನಡವನ್ನು ಕೊಡಗಿನ ನೆಲದಲ್ಲಿ ಈ ಹಿಂದೆ ಶ್ರೀಮಂತಗೊಳಿಸಿದ ಹಿರಿಯರನ್ನು ನೆನಪಿಸಿಕೊಂಡರು. ಸದ್ಯದ ಪರಿಸ್ಥಿತಿಯಲ್ಲಿ ಕನ್ನಡದಲ್ಲಿ , ಕೃತಿರಚನೆಯ ಕೆಲಸ ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿದರೂ ಅವರಲ್ಲಿ ಕೊಡಗಿನವರು ಯಾರೂ ಇಲ್ಲ. ಎಂದು ವಿಷಾಧಿಸಿದರು. ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ, ಕಾಯ೯ಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಲವು ಬರಹಗಾರರು ಕೊಡಗಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಹೊಸಹೊಸ ಯೋಜನೆಗಳೊಂದಿಗೆ ಕೃತಿಕಾರರಿಗೆ ಒತ್ತಾಸೆಯಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಪರಿಣತರಾದ ಸಂಪನ್ಮೂಲ ವ್ಯಕ್ತಿಗಳಿಂದ ಉದಯೋನ್ಮಖ ಬರಹಗಾರರಿಗೆ ಪರಿಷತ್ತು ತರಬೇತಿ ನೀಡಲಿದೆ ಎಂದರು. ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ, ಕೃತಿಕಾರರು ತಮ್ಮ ಕೃತಿಗಳ ಮೌಲ್ಯದ ಕಡೆಗೆ ಹೆಚ್ಚು ಗಮನ ನೀಡಬೇಕು. ಪ್ರಕಾಶನ ಪ್ರಪಂಚದ ಜಾಲದೊಳಗೆ ಸಿಕ್ಕಿಹಾಕಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು. ಮತ್ತೆ ವಸಂತ’ ಕೃತಿಯನ್ನು ಪತ್ರಕರ್ತ , ಮಡಿಕೇರಿ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ . ಅನಿಲ್ ಹೆಚ್.ಟಿ. ಪರಿಚಯಿಸಿ, 164 ಪುಟಗಳ ಮತ್ತೆ ವಸಂತ 31 ವಿಭಿನ್ನ ಕಥೆಗಳ ಗುಚ್ಚವಾಗಿ ಓದುಗರ ಮನಸ್ಸನ್ನು ಹಿಡಿದಿಡುತ್ತದೆ. ಸರಳ ಮತ್ತು ಶುದ್ದ ಭಾಷೆಯಿಂದಾಗಿ ಮತ್ತೆ ವಸಂತ ಬಹಳ ಕಾಲ ಮನಸ್ಸಿನಲ್ಲಿ ಉಳಿಯುವಂಥ ಕಥೆಗಳನ್ನು ಹೊಂದಿದೆ ಎಂದು ಶ್ಲಾಘಿಸಿದರು. ಮತ್ತೆ ವಸಂತ ಕಥಾಸಂಕಲನದಲ್ಲಿ ಪ್ರೀತಿಸಿ ಕೈ ಕೊಟ್ಟ ವಂಚಕ ಮನಸ್ಸಿವನಿದ್ದಾನೆ ಅಂತೆಯೇ ಪ್ರೀತಿ ನಂಬಿ ದಾರಿ ತಪ್ಪಿದವಳಿಗೆ ಬದುಕು ಕೊಟ್ಟ ಹೃದಯವಂತನಿದ್ದಾನೆ. ಮಮತೆ ತೋರದ ತಾಯಿ ಇದ್ದಾಳೆ. ಹೆತ್ತ ತಾಯಿ ಅಲ್ಲದಿದ್ದರೂ ಎತ್ತಿ ಮುದ್ದು ಮಾಡಿ ಪೊರೆದ ಮಾತೆ ಇದ್ದಾಳೆ. ಆಸ್ತಿಗಾಗಿ ತಮ್ಮನನ್ನು ನಿರ್ಲಕ್ಷ ಮಾಡಿದ ಅಣ್ಣ ಇದ್ದಾನೆ. ಅಣ್ಣ ಪಿತೃ ಸಮಾನ ಎಂದೇ ಕೊನೆವರೆಗೂ ನಂಬಿ ನಡೆದ ತಮ್ಮನಿದ್ದಾನೆ. ಶಿಕ್ಷಣ ಪಡೆದು ಬಾಂಧವ್ಯ ಮರೆತ ವಿದ್ಯಾವಂತನಿದ್ದಾನೆ.. ಶಿಕ್ಷಣವಿಲ್ಲದಿದ್ದರೂ ಬಾಂಧವ್ಯದ ಬೇರು ….ವಿಧೇಯತೆ ಎಂದು ನಂಬಿದ ಅವಿದ್ಯಾವಂತ ಇದ್ದಾನೆ. ಹೀಗೆ ಸಮಾಜದ ನಾನಾ ಸ್ತರಗಳ ನಾನಾ ಮುಖಗಳ , ನಾನಾ ಮನಸ್ಥಿತಿಗಳ ಚಿತ್ರಣವನ್ನು ಸಮಥ೯ವಾಗಿ ಮತ್ತೆ ವಸಂತ ಕೖತಿ ಕಟ್ಟಿಕೊಟ್ಟಿದೆ ಎಂದು ಶ್ಲಾಘಿಸಿದರು. ಬೆಳ್ತಂಗಡಿಯ ಜಯಶಂಕರ ಶರ್ಮ ಮಾತನಾಡಿ, ಕೊಡಗಿನ ಪರಿಸರ ಪರಂಪರೆಯ ಬಗ್ಗೆ ಅಭಿಮಾನದ ನುಡಿಗಳನ್ನಾಡಿ ಈ ಪರಿಸರ ಇಲ್ಲಿಯ ಸಮೃದ್ಧ ಅನುಭವ ಸಾಹಿತ್ಯ ಕೃತಿಗಳಲ್ಲಿ ಅಭಿವ್ಯಕ್ತಿ ಪಡೆಯಬೇಕು ಎಂದರು. ಲೇಖಕಿ ಕೆ.ಜಯಲಕ್ಷ್ಮಿ ಸ್ವಾಗತಿಸಿದರು. ಬರಹಗಾರ್ತಿ ಪ್ರತಿಮಾಹರೀಶ್ ಹಾಗೂ ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು. ಚಿತ್ರ ಆರ್ಯನ್ ವಂದಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಕೇಶವ ಕಾಮತ್ ಉಪಸ್ಥಿತರಿದ್ದರು. ಮಕ್ಕಳಿಂದ ನೃತ್ಯ, ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಬಾಳಲೆಯ ಯುವ ಗಾಯಕ ಅನ್ವಿತ್ ಕುಮಾರ್ ಸುಗಮ ಸಂಗೀತದ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.