ವಿರಾಜಪೇಟೆ ಜ.29 NEWS DESK : ಕೊಂಡಂಗೇರಿ ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತ ಇದರ 2025-30ನೇ ಸಾಲಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಹಿಂದುಳಿದ ಕ್ಷೇತ್ರದಿಂದ ಚುನಾಯಿತರಾದ ಎ.ಎಂ.ಸಾದುಲಿ ಮತ್ತು ಉಪಾಧ್ಯಕ್ಷರಾಗಿ ಸಾಮಾನ್ಯ ಕ್ಷೇತ್ರದಿಂದ ಚುನಾಯಿತರಾದ ಪುಡಿಯಂಡ.ಇ.ಸಾದುಲಿ ಆಯ್ಕೆಗೊಂಡಿದ್ದಾರೆ. ಕೊಂಡಂಗೇರಿ ಸಹಕಾರ ದವಸ ಭಂಡಾರದ ನೂತನ ಆಡಳಿತ ಮಂಡಳಿಗೆ ಒಟ್ಟು 11 ಜನ ಆಯ್ಕೆಗೊಂಡಿದ್ದರು. ಈ ಪೈಕಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಟಿ.ಎ.ಆಲಿ, ಎನ್.ಈ. ಇಬ್ರಾಹಿಂ, ಜೆ.ಎಂ.ಇಬ್ರಾಹಿಂ, ಪುದಿಯಪೊರೆ ಹಸಿನಾರ್, ಮೇಕೇರಿರ ಪಿ. ರಾಧಾಪತಿ, ಜೆ.ಎ.ಸಾದುಲಿ, ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೇಕೇರಿರ ಜಲಾಶ್ ರಾಧಾಪತಿ, ಮೇಕೇರಿರ ರಾಧಾ ತಮ್ಮಯ್ಯ ಮತ್ತು ಹಿಂದುಳಿದ ವರ್ಗದಿಂದ ಸ್ಪರ್ಧಿಸಿದ್ದ ಎಂ.ಎಂ. ಮಮ್ಮದ್ ನಿರ್ದೇಶಕರಾಗಿ ಚುನಾಯಿತರಾಗಿದ್ದರು. ದವಸ ಭಂಡಾರದ ಆಡಳಿತ ಮಂಡಳಿಗೆ ಸ್ಪರ್ಧಿಸಿದ್ದ ಈ 11 ಜನರು ಸಹಕಾರ ಸಂಘಗಳ ನಿಯಮ1960, 14(ಜಿ)ನಲ್ಲಿನ ಉಪಬಂಧಾನುಸಾರ ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಹಾಲುಗುಂದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಉಜ್ಮಾ ಜಬೀನ್ ಅಧಿಕೃತವಾಗಿ ಘೋಷಿಸಿರುವುದಾಗಿ ಕೊಂಡಂಗೇರಿ ಸಹಕಾರ ದವಸ ಭಂಡಾರದ ಕಾರ್ಯದರ್ಶಿ ಮೈನಾ ಪೊನ್ನಣ್ಣ ತಿಳಿಸಿದರು. ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಪುಡಿಯಂಡ ಇ.ಸಾದುಲಿ ಅವರು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ)ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.