ಸೋಮವಾರಪೇಟೆ ಜ.29 NEWS DESK : ಕೂಗೆಕೋಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳ್ಳತನ ನಡೆದಿದೆ ಸಿ.ಸಿ.ಕ್ಯಾಮೆರಾ ಅಳವಡಿಸಿಕೊಡಬೇಕು. ಶಾಲೆಯ ಸುತ್ತ ಕಾಂಪೌಂಡ್ ನಿರ್ಮಿಸಿಕೊಡಿ, ಗ್ರಂಥಾಲಯಕ್ಕೆ ಪುಸ್ತಕಗಳು ಬೇಕು ಎಂದು ವಿದ್ಯಾರ್ಥಿಗಳಾದ ನಂದಿನಿ, ಜಾಹ್ನವಿ ಮತ್ತು ಮೋಕ್ಷ ಕೇಳಿಕೊಂಡರು. ದೊಡ್ಡಮಳ್ತೆ ಗ್ರಾ.ಪಂ ವತಿಯಿಂದ ದೊಡ್ಡಮಳ್ತೆ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ವಿವಿಧ ಬೇಡಿಕೆಯನ್ನು ಸಭೆಯ ಮುಂದಿಟ್ಟರು. ದೊಡ್ಡಮಳ್ತೆ ಗ್ರಾಮ ಹೊನ್ನಮ್ಮನ ಕೆರೆ ಸಮೀಪದಲ್ಲಿ ವಾಸವಿರುವ 5ನೇ ತರಗತಿ ವಿದ್ಯಾರ್ಥಿನಿ ಮಾತನಾಡಿ ನಮ್ಮ ಮನೆಲಿ ಕರೆಂಟ್ ಇಲ್ಲ, ಕರೆಂಟ್ ಹಾಕಿಸಿಕೊಡಿ ಎಂದು ಮನವಿ ಮಾಡಿದಳು. ದೀಪಕ್ಕೆ ಸೀಮೇಣ್ಣೆಯೂ ಸಿಗುತ್ತಿಲ್ಲ. ದುಡ್ಡಿಲ್ಲ ಅಂತ ಕ್ಯಾಂಡಲ್ ತರುತ್ತಿಲ್ಲ. ಓದಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದಳು. ವಿದ್ಯುತ್ ಹಾಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಭರವಸೆ ನೀಡಿದರು. ನಾವು ಹಳ್ಳಿಗಳಿಂದ ನಡೆದುಕೊಂಡು ಬರಬೇಕು. ದಾರಿಯಲ್ಲಿ ಬೀದಿನಾಯಿಗಳ ಕಾಟ ಪ್ರಾಥಮಿಕ ಶಾಲೆಯ ಮಕ್ಕಳಿಗೂ ಸೈಕಲ್ ಕೊಡಬೇಕೆಂದು ದೊಡ್ಡಮಳ್ತೆ ಶಾಲೆಯ ಭುವನ್ ಮನವಿ ಮಾಡಿದ. ವಳಗುಂದ ಗಿರಿಜನರ ಹಾಡಿಗೆ ಶುದ್ದ ಕುಡಿಯುವ ನೀರು ಬೇಕು. ಶಾಲೆಗೆ ಬರಲು ವಾಹನ ಬೇಕು ಎಂದು 4ನೇ ತರಗತಿಯ ಅಕ್ಷರ ಕೇಳಿಕೊಂಡಳು. ದೊಡ್ಡಮಳ್ತೆ ಶಾಲೆಗೆ ಶೌಚಾಲಯ ದುರಸ್ತಿ ಪಡಿಸಿಕೊಡಬೇಕು ಎಂದು ಖಲೀಲ್ ಮನವಿ ಮಾಡಿದ. ಸರ್ಕಾರಿ ಶಾಲೆಗಳ ಮಕ್ಕಳಿಗೆ ಸೌಲಭ್ಯಗಳನ್ನು ಒದಗಿಸುವುದು ಸಮುದಾಯದ ಕರ್ತವ್ಯವಾಗಿದೆ. ಎಲ್ಲಾ ಇಲಾಖೆಗಳು ಸೇರಿಕೊಂಡು ಅನುದಾನ ನೀಡಬೇಕಾಗುತ್ತದೆ ಎಂದು ಪಂಚಾಯಿತಿ ಅಧ್ಯಕ್ಷರು ಮನವಿ ಮಾಡಿದರು. ದೊಡ್ಡಮಳ್ತೆ ಶಾಲೆಯಲ್ಲಿ ಶೌಚಗೃಹ ನಿರ್ಮಿಸಿಕೊಡಲಾಗುವುದು. ಅಂಗನವಾಡಿಗಳಿಗೆ ಕುರ್ಚಿಗಳನ್ನು ನೀಡಲಾಗುತ್ತದೆ. ಕುಡಿಯುವ ನೀರಿನ ಎಲ್ಲಾ ಟ್ಯಾಂಕ್ಗಳನ್ನು ಶುಚಿಗೊಳಿಸಿಕೊಡಲಾಗುವುದು. ಕೆಲ ಮಕ್ಕಳಿಗೆ ಅಧಾರ್ ಕಾರ್ಡ್, ಜಾತಿ ದೃಡೀಕರಣ ಪತ್ರ, ರೇಷನ್ಕಾರ್ಡ್ ಇಲ್ಲದ ಹಿನ್ನೆಲೆ ವಿದ್ಯಾರ್ಥಿ ವೇತನ ಸೇರಿದಂತೆ ಇನ್ನಿತರ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಸಂಬಂಧಪಟ್ಟ ಇಲಾಖೆಗಳು ಒಂದು ಕಡೆ ಕ್ಯಾಂಪ್ ಮಾಡಿ ಸೂಕ್ತ ದಾಖಲಾತಿಗಳನ್ನು ವಿತರಿಸಬೇಕು ಎಂದು ಮನವಿ ಮಾಡಿದರು. ಆರೋಗ್ಯ ಇಲಾಖೆಯ ದಿವ್ಯ ಮಾತನಾಡಿ, ವಿದ್ಯೆ ಕಲಿಯಲು ಅರೋಗ್ಯ ಮುಖ್ಯವಾಗಿದೆ. ಮಕ್ಕಳಲ್ಲಿ ರಕ್ತಹೀನತೆ ತಡೆಗಟ್ಟಲು ಕಬ್ಬಿಣಾಂಶದ ಮಾತ್ರೆಗಳನ್ನು ನೀಡಲಾಗುತ್ತಿದೆ. ಮಕ್ಕಳು ಊಟದ ನಂತರ ಕಡ್ಡಾಯವಾಗಿ ಮಾತ್ರೆ ಸೇವಿಸಬೇಕು ಎಂದು ಮನವಿ ಮಾಡಿದರು. ಹೆಣ್ಣು ಮಕ್ಕಳಿಗೆ ಶುಚಿ ಪ್ಯಾಡ್ಗಳನ್ನು ಶಾಲೆಗೆ ವಿತರಿಸಲಾಗುತ್ತಿದೆ ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸಾವಿತ್ರಮ್ಮ ಮಾತನಾಡಿ, ಅಂಗನವಾಡಿಯ ಮೂಲ ಉದ್ದೇಶ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವುದಾಗಿದೆ. ಭಾಗ್ಯಲಕ್ಷ್ಮೀ ಬಾಂಡ್ಗಳ ಮೂಲಕ ಹೆಣ್ಣುಮಕ್ಕಳಿಗೆ ಭವಿಷ್ಯ ಕಟ್ಟಿಕೊಡಲಾಗಿದೆ. ಫಲಾನುಭವಿ ಮಕ್ಕಳು ಕಡ್ಡಾಯ ಪಿಯುಸಿ ಓದಿದ ನಂತರ ಭಾಗ್ಯಲಕ್ಷ್ಮಿ ಹಣ ಪಡೆದುಕೊಳ್ಳಬಹುದು. ಬಾಲ್ಯವಿವಾಹವಾದರೆ, ಶಾಲೆ ಬಿಟ್ಟರೆ ಸೌಲಭ್ಯ ಸಿಗದು ಎಂದು ಮಕ್ಕಳಿಗೆ ತಿಳಿಹೇಳಿದರು. ವೇದಿಕೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ರಶೀದಾ, ಸದಸ್ಯರಾದ ಶಂಕರ, ಅನುಕುಮಾರ್, ಭಾಗ್ಯಮ್ಮ, ಮುಖ್ಯ ಶಿಕ್ಷಕಿ ತಂಗಮ್ಮ, ಪಿಡಿಒ ಸ್ಮಿತಾ, ವಿದ್ಯಾರ್ಥಿ ತಿಲಕ್, ಸಿಆರ್ಪಿ ದೇವರಾಜೇಗೌಡ, ನಾವು ಪ್ರತಿಷ್ಠಾನದ ಪೊನ್ನಪ್ಪ, ಬಿ.ಕೆ.ಕುಮಾರಿ ಇದ್ದರು. ಶಿಕ್ಷಕ ಶಿವಶಂಕರ್, ಹರಿಣಿ ಕಾರ್ಯಕ್ರಮ ನಿರ್ವಹಿಸಿದರು.