ನಾಪೋಕ್ಲು ಜ.30 NEWS DESK : ನಾಪೋಕ್ಲು ಹೋಬಳಿ ಮಟ್ಟದ ಪಿಂಚಣಿ ಆದಲತ್ ನಡೆಸುವುದರಿಂದ ವಯೋವೃದ್ಧರಿಗೆ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಕಂದಾಯ ಪರಿವೀಕ್ಷಕ ರವಿಕುಮಾರ್ ಹೇಳಿದರು. ಚೆಯ್ಯಡಾಂಣೆ ನರಿಯಂದಡ ಗ್ರಾ.ಪಂ ವ್ಯಾಪ್ತಿಗೆ ಒಳಪಟ್ಟ ಗ್ರಾಮಸ್ಥರಿಗೆ ಚೆಯ್ಯಡಾಂಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಹೋಬಳಿ ಮಟ್ಟದ ಪಿಂಚಣಿ ಆದಾಲತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯ ಸರ್ಕಾರದ ಆದೇಶದಂತೆ ಮಾನ್ಯ ತಹಶೀಲ್ದಾರ್ ಅವರ ನಿರ್ದೇಶನದಂತೆ ನರಿಯಂದಡ ಗ್ರಾಮದಲ್ಲಿ ಪಿಂಚಣಿ ಅದಾಲತ್ ನಡೆಸಲಾಗಿದೆ. ಆಧಾರ್ ಕಾರ್ಡ್ ಈಕೆ ವೈಸಿ ಮಾಡಿಸದೆ ಇರುವುದರಿಂದ ಹಾಗೂ ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡದೇ ಇರುವುದರಿಂದ ಫಲಾನುಭವಿಗಳು ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅವರಿಗೆ ಸಕಾಲದಲ್ಲಿ ಪಿಂಚಣಿ ಸೌಲಭ್ಯ ದೊರಕಲು ನೆರವಾಗುವಂತೆ ಪಿಂಚಣಿ ಆಯೋಜಿಸಲಾಗಿದೆ ಎಂದರು. ನರಿಯಂದಡ ಗ್ರಾ.ಪಂ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಸದಸ್ಯರಾದ ಮಹಮ್ಮದ್, ರಾಜೇಶ್ ಅಚ್ಚಯ್ಯ, ಗ್ರಾಮ ಅಭಿವೃದ್ಧಿ ಅಧಿಕಾರಿ (ಪಿಡಿಒ) ಆಶಾ ಕುಮಾರಿ, ಗ್ರಾಮ ಲೆಕ್ಕಿಗರಾದ ಅಮೃತ, ಸ್ವಾತಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಒಟ್ಟು 30 ಜನ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪ್ರತಿಗಳನ್ನು ನೀಡಲಾಗಿದ್ದು, ಹೊಸದಾಗಿ 23 ಅರ್ಜಿಗಳನ್ನು ಸ್ವೀಕರಿಸಲಾಯಿತು.