ಮಡಿಕೇರಿ NEWS DESK ಜ.30 : ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕೊಡಗು ಜಿಲ್ಲಾ ಘಟಕ ಪಂಚ ಪ್ರಶ್ನೆಗಳನ್ನಿಟ್ಟಿದೆ. ಈ ಕುರಿತು ಪ್ರತಿಕಾ ಪ್ರಕಟಣೆ ನೀಡಿರುವ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ 2015 ರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್.ಕಾಂತರಾಜ್ ಅವರು ವೈಜ್ಞಾನಿಕವಾಗಿ ತಯಾರಿಸಿದ ಹಿಂದುಳಿದ ವರ್ಗಗಳ ಜಾತಿ ಜನಗಣತಿ ವರದಿಯನ್ನು ಯಾಕೆ ಸಚಿವ ಸಂಪುಟ ಅಂಗೀಕರಿಸಿ, ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ ಚರ್ಚೆಗೆ ಮಂಡಿಸಿಲ್ಲ? ರಾಹುಲ್ ಗಾಂಧಿಯವರು ಕೇಂದ್ರ ಮಟ್ಟದಲ್ಲಿ ಜಾತಿ ಜನಗಣತಿಗೆ ಒತ್ತು ನೀಡುತ್ತಿರುವಾಗ ರಾಜ್ಯದಲ್ಲಿ ಕಾಂತರಾಜ್ ಆಯೋಗದ ಶಿಫಾರಸ್ಸು ಅನುಷ್ಠಾನಗೊಳಿಸಲು ಹಿಂದೇಟು ಹಾಕುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. 2023 ರ ಚುನಾವಣೆ ಪ್ರಣಾಳಿಕೆಯ ಭರವಸೆಯಂತೆ ಹಿಂದಿನ ಬಿಜೆಪಿ ಸರಕಾರ ಮುಸಲ್ಮಾನರಿಂದ ಕಿತ್ತುಕೊಂಡ ಮೀಸಲಾತಿಯನ್ನು ಮರು ಸ್ಥಾಪಿಸುವ ಬದ್ಧತೆ ಏನಾಯಿತು? ಗೆದ್ದು ಅಧಿಕಾರಕ್ಕೆ ಬಂದ ಮೊದಲನೆಯ ಮಂತ್ರಿಮಂಡಲದಲ್ಲಿ ಅನುಷ್ಠಾನಗೊಳಿಸುವ ವಾಗ್ಧಾನ ಜಾರಿಗೆ ಬರುತ್ತಿಲ್ಲ ಏಕೆ ? ಸರಕಾರಿ ಭೂಮಿಯನ್ನು ಅಕ್ರಮವಾಗಿ ಹಿಡಿದಿಟ್ಟುಕೊಂಡಿರುವ ಭೂಹಿಡುವಳಿದಾರರಿಗೆ ರೂ.1000 ದಂತೆ 25 ಎಕರೆವರೆಗೂ 30 ವರ್ಷಕ್ಕೆ ಗುತ್ತಿಗೆ ನೀಡಲು 18.05.2023 ರಂದು ಹೊರಡಿಸಿರುವ ಕರ್ನಾಟಕ ರಾಜ್ಯ ಪತ್ರವನ್ನು ರದ್ದುಗೊಳಿಸಿ ಶತಮಾನಗಳಿಂದ ಪಾರಂಪರಿಕ ನಿವೇಶನ ಹಾಗೂ ಭೂ ರಹಿತ ಬಡ ಕುಟುಂಬಗಳ ಸಮೀಕ್ಷೆ ನಡೆಸಿ ಹಕ್ಕುಪತ್ರ, ಪಹಣಿ ಹಾಗೂ ಆರ್ ಟಿ ಸಿ ನೀಡಲು ಮುಂದಾಗುವಿರ ಅಥವಾ ಭೂಹಿಡುವಳಿದಾರ ಬಲಾಢ್ಯ ಸಮಾಜದ ಪರವಾಗಿ ನಿಲ್ಲುವಿರಾ? ಸಂಸತ್ತಿನ ಜಂಟಿ ಸಮಿತಿಯು ವಕ್ಫ್ (ತಿದ್ದುಪಡಿ) ಮಸೂದೆಗೆ ಬಹುತೇಕ ಬಿಜೆಪಿ ಸಂಸದರು ಸೂಚಿಸಿರುವ ಬದಲಾವಣೆಗಳನ್ನು ಎತ್ತಿ ಹಿಡಿದಿದ್ದು, ವಿರೋಧ ಪಕ್ಷದ ಸದಸ್ಯರ ಸಲಹೆಗಳಿಗೆ ಮನ್ನಣೆ ನೀಡದೆ ಮತದಾನದ ನಂತರ ಸದನಕ್ಕೆ ವರದಿ ಸಲ್ಲಿಸಲು ಮುಂದಾಗಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಸರ್ಕಾರ ಯಾವ ನಿಲುವನ್ನು ತೆಗೆದುಕೊಳ್ಳಲಿದೆ ? ಕೊಡಗು ಜಿಲ್ಲಾಧಿಕಾರಿಯವರ ಕಚೇರಿಯ ಮುಂಭಾಗದ ತಡೆಗೋಡೆ ಬೀಳುವ ಹಂತದಲ್ಲಿದ್ದಾಗ ಶಾಡೋ ಮುಖ್ಯಮಂತ್ರಿಗಳಾಗಿ ವೀಕ್ಷಣೆಗೆ ಬಂದು ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವ ಆದೇಶ ನೀಡಿ, ಇದೀಗ ಮುಖ್ಯಮಂತ್ರಿಗಳಾಗಿ ಒಂದೂವರೆ ವರ್ಷವಾದರೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಳ್ಳಬೇಕಾದರೆ ಇನ್ನೆಷ್ಟು ಬಾರಿ ಅಧಿಕಾರಿಗಳಿಗೆ ತಾವು ಆದೇಶ ನೀಡಬೇಕಾಗಿದೆ ? ಮುಖ್ಯಮಂತ್ರಿ ಸಿದ್ದರಾಮಯ್ಯ 1.0 ಎಂದರೆ ಧೈರ್ಯ, ಸಮರ್ಥ, ಮಾತಿಗೆ ಬದ್ಧ, ನುಡಿದಂತೆ ನಡೆಯುವ ವ್ಯಕ್ತಿತ್ವ, ಸಿದ್ದರಾಮಯ್ಯ 2.0 ಬದಲಾಗಿದ್ದಾರಾ ಎಂದು ಅಮೀನ್ ಮೊಹಿಸಿನ್ ಪ್ರಶ್ನಿಸಿದ್ದಾರೆ.