



ಮಡಿಕೇರಿ ಫೆ.6 NEWS DESK : ಕೊಡವ ಹಾಗೂ ಕೊಡವ ಭಾಷಿಕ ಸಮುದಾಯಗಳ ಸಂಸ್ಕೃತಿಯ ಭದ್ರತೆ ಮತ್ತು ಹಕ್ಕುಗಳಿಗಾಗಿ ಒತ್ತಾಯಿಸಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕುಟ್ಟದಿಂದ ಮಡಿಕೇರಿಯವರೆಗೆ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ನಡೆಯುತ್ತಿರುವ ‘ಕೊಡವಾಮೆ ಬಾಳೋ’ ಕೊಡವರ ಬೃಹತ್ ಪಾದಯಾತ್ರೆ ಅಂತಿಮ ಹಂತಕ್ಕೆ ತಲುಪಿದ್ದು, ಫೆ.7 ರಂದು ಮಡಿಕೇರಿಯಲ್ಲಿ ಸಮಾರೋಪಗೊಳ್ಳಲಿದೆ. ಪಾದಯಾತ್ರೆ ಶುಕ್ರವಾರ ಮೇಕೇರಿಯಿಂದ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತ ತಲುಪಲಿದೆ. ಕ್ರಮವಾಗಿ ಗಾಳಿಬೀಡು ಮಾರ್ಗವಾಗಿ ಒಂದು, ತಾಳತ್ತಮನೆ ಮಾರ್ಗವಾಗಿ ಎರಡು ತಂಡಗಳು ತಿಮ್ಮಯ್ಯ ವೃತ್ತ ತಲುಪಲಿದೆ. ಕುಶಾಲನಗರ ಸುಂಟಿಕೊಪ್ಪ, ಸಂಪಿಗೆಕಟ್ಟೆ ಮಾರ್ಗವಾಗಿ ಒಂದು ತಂಡ, ಮಕ್ಕಂದೂರು ಸಂಪಿಗೆಕಟ್ಟೆ ಮಾರ್ಗವಾಗಿ ಒಂದು ತಂಡ, ಸಿದ್ದಾಪುರ ಚೆಟ್ಟಳ್ಳಿ ಮಾರ್ಗವಾಗಿ ಮತ್ತೊಂದು ತಂಡ ಬಂದು ಫೀ.ಮಾ.ಕಾರ್ಯಪ್ಪ ವೃತ್ತವನ್ನು ತಲುಪಲಿದೆ. ಫೀ.ಮಾ.ಕಾರ್ಯಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಜನರಲ್ ತಿಮ್ಮಯ್ಯ ವೃತ್ತದ ಬಳಿ ಯಾತ್ರೆ ಸೇರಿಲಿದೆ. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸಮಾಗಮವಾಗುವ ಎಲ್ಲಾ ತಂಡಗಳು ಒಟ್ಟಾಗಿ ಸೇರಿ ಮಡಿಕೇರಿಯ ಮಂಗೇರಿರ ಮುತ್ತಣ್ಣ ವೃತ್ತ, ಅಜ್ಜಮಾಡ ದೇವಯ್ಯ ವೃತ್ತ ಕೊಹಿನೂರ್ ರಸ್ತೆ, ಎಸ್.ಬಿ.ಐ. ಚೌಕಿ, ಜೂನಿಯರ್ ಕಾಲೇಜು ರಸ್ತೆ ಮೂಲಕ ಸಾಗಿ, ಮಡಿಕೇರಿ ಜ.ತಿಮ್ಮಯ್ಯ ಕ್ರೀಡಾಂಗಣದ ಬಳಿ ಇರುವ ಕೊಡವ ಸಮಾಜ ಮಂದ್’ನಲ್ಲಿ ಸಮಾವೇಶಗೊಳ್ಳಲಿದೆ. ಸಾಗುವ ಮಾರ್ಗದಲ್ಲಿ ನಮ್ಮ ಎಲ್ಲಾ ಮಹಾನ್ ನಾಯಕರುಗಳ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಲಾಗುತ್ತದೆ. ಮಂದ್‍ನಲ್ಲಿ ನಿಂತು ಸರಕಾರದ ಪ್ರತಿನಿಧಿಗೆ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಲು ಅಖಿಲ ಕೊಡವ ಸಮಾಜ ಹಾಗೂ ವಿವಿಧ ಕೊಡವ ಸಂಘಟನೆಗಳು ನಿರ್ಧರಿಸಿವೆ.
::: 700ಕ್ಕೂ ಅಧಿಕ ಪೊಲೀಸರ ನಿಯೋಜನೆ ::: ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಕೊಡವ ಬಾಂಧವರು ಶುಕ್ರವಾರ ಮಡಿಕೇರಿಯಲ್ಲಿ ನಡೆಸುವ ಬೃಹತ್ ಪಾದಯಾತ್ರೆಯಲ್ಲಿ ಪೊಲೀಸ್ ಮೂಲದ ಪ್ರಕಾರ 15 ರಿಂದ 25 ಸಾವಿರಕ್ಕೂ ಹೆಚ್ಚಿನ ಮಂದಿ ಸಮಾವೇಶಗೊಳ್ಳುವ ಸಾಧ್ಯತೆಗಳಿದೆ. ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಜಿಲ್ಲಾ ಪೊಲೀಸ್ ಹಾಗೂ ಹೊರ ಜಿಲ್ಲೆಗಳ ವಿವಿಧ ಘಟಕಗಳ ಅಧಿಕಾರಿಗಳು ಸೇರಿದಂತೆ 700ಕ್ಕೂ ಅಧಿಕ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಬಂದೋಸ್ತ್‍ನಲ್ಲಿ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರೊಂದಿಗೆ, 6 ಮಂದಿ ಪೊಲೀಸ್ ಉಪಾಧೀಕ್ಷಕರು, 18 ಪೊಲೀಸ್ ನಿರೀಕ್ಷಕರು, 35 ಪೊಲೀಸ್ ಉಪನಿರೀಕ್ಷಕರು, 55 ಸಹಾಯಕ ಪೊಲೀಸ್ ಉಪನಿರೀಕ್ಷಕರು, 430 ಪೊಲೀಸ್ ಹೆಡ್ ಕಾನ್ಸ್‍ಟೇಬಲ್ಸ್ ಮತ್ತು ಕಾನ್ಸ್‍ಟೇಬಲ್ಸ್, 5 ಪ್ಲಟೂನ್ ಕೆ.ಎಸ್.ಆರ್.ಪಿ (100 ಸಿಬ್ಬಂದಿಗಳು), 70 ಮಂದಿ ಡಿ.ಎ.ಆರ್. ಪೊಲೀಸರು ಬಂದೋಬಸ್ತ್‍ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
::: ಮದ್ಯ ಮಾರಾಟ ನಿಷೇಧ ::: ಫೆ.7 ರಂದು ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬೆಳಗ್ಗೆ 6 ರಿಂದ ರಾತ್ರಿ12 ಘಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ತುರ್ತು ಕರೆಗೆ ಸಂಪರ್ಕಿಸಿ :: ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಜಿಲ್ಲಾ ಪೊಲೀಸ್ ಕಚೇರಿ ದೂರವಾಣಿಗೆ ಸಂಖ್ಯೆ: 08272-228330 ಮತ್ತು 9480804900 ಕ್ಕೆ ಕರೆ ಮಾಡಿ ಮಾಹಿತಿ ಒದಗಿಸುವಂತೆ ಹಾಗೂಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮನವಿ ಮಾಡಿದ್ದಾರೆ.
::: ಗಮನ ಸೆಳೆಯುತ್ತಿರುವ ಐತಿಹಾಸಿಕ ಪುರುಷರ ಕಟೌಟ್ ::: ಕೊಡವ ಸಮುದಾಯದಲ್ಲಿ ತಮ್ಮ ಪರಾಕ್ರಮ, ಕೆಚ್ಚೆದೆಯ ಹೋರಾಟಗಳಿಂದ ಗಮನ ಸೆಳೆದಿರುವ ಐತಿಹಾಸಿಕ ಮಹಾನ್ ಪುರುಷರ ಬೃಹತ್ ಫ್ಲೆಕ್ಸ್‍ಗಳನ್ನು ನಗರದ ಮುಖ್ಯ ರಸ್ತೆಯಲ್ಲಿ ಅಳವಡಿಸುವ ಮೂಲಕ ‘ಕೊಡವಾಮೆ ಬಾಳೋ’ ಪಾದಯಾತ್ರೆಗೆ ವಿಶೇಷ ಮೆರುಗನ್ನು ನೀಡುವ ಪ್ರಯತ್ನ ನಡೆದಿದೆ. ಕೊಡವರ ಐತಿಹಾಸಿಕ ಪುರುಷರಾದ ಅಪ್ಪಚ್ಚೀರ ಮಂದಣ್ಣ, ಬೊಟ್ಟೋಳಂಡ ಮಾಣಿಚ, ಕುಲ್ಲೇಟಿರ ಪೊನ್ನಣ್ಣ, ಕನ್ನಂಡ ದೊಡ್ಡಯ್ಯ ಅವರುಗಳ ಫ್ಲೆಕ್ಸ್‍ಗಳು ಗಮನ ಸೆಳೆಯುತ್ತಿವೆ. ಪಾದಯಾತ್ರೆಯ ಸಮಾರೋಪ ನಡೆಯಲಿರುವ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಬಳಿಯ ‘ಮಂದ್’ನ್ನು ಸ್ವಚ್ಛಗೊಳಿಸಿ, ಅಲಂಕಾರಗಳನ್ನು ಮಾಡಲಾಗಿದೆ. ಭೋಜನಕ್ಕೆ ಸಕಲ ಸಿದ್ಧತೆ- ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಹಸ್ರಾರು ಮಂದಿಗೆ ಮಧ್ಯಾಹ್ನದ ಭೋಜನಕ್ಕಾಗಿ ಅಗತ್ಯ ಸಿದ್ಧತೆಗಳು ನಡೆದಿದೆ. ಸಮಾರೋಪದಂದು ಸಮಾವೇಶಗೊಳ್ಳುವ ಕೊಡವ ಬಾಂಧವರಿಗೆ ಊಟಕ್ಕಾಗಿ 20 ಕೌಂಟರ್‍ಗಳನ್ನು ವ್ಯವಸ್ಥೆಗೊಳಿಸಲಾಗುತ್ತಿದೆ.
::: ವಾಹನ ಪಾರ್ಕಿಂಗ್ ತಾತ್ಕಾಲಿಕ ಬದಲಾವಣೆ ::: ಕೊಡವ ಜನಾಂಗ ಮತ್ತು ಕೊಡವ ಭಾಷಿಕ ಸಮುದಾಯಗಳ ಕೊಡವಾಮೆ ಬಾಳೋ ಪಾದಯಾತ್ರೆ ಹಿನ್ನೆಲೆ ಮಡಿಕೇರಿ ನಗರದಲ್ಲಿ ಫೆ.7 ರಂದು ನಗರದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ.
ಸುದರ್ಶನ ರಸ್ತೆ, ಜಿಲ್ಲಾ ಆಸ್ಪತ್ರೆ ರಸ್ತೆ, ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗಳೂರು ರಸ್ತೆ, ವಿನೋದ್ ಮೆಡಿಕಲ್ ಮುಂಭಾಗ, ಬಾಲಾಜಿ ಸ್ಟೋರ್ ಮುಂಭಾಗ, ಹಳೇ ಖಾಸಗಿ ಬಸ್ ನಿಲ್ದಾಣ ಆವರಣ, ಕಾರ್ ಟ್ಯಾಕ್ಸಿ ನಿಲ್ದಾಣ, ಕಾಲೇಜು ರಸ್ತೆ, ಗಣಪತಿ ಬೀದಿ, ಮಾರುಕಟ್ಟೆ ಆವರಣ, ಜ್ಯೂನಿಯರ್ ಕಾಲೇಜು ರಸ್ತೆ ಸೇರಿದಂತೆ ಜನ ಸಂದಣಿ ಏರ್ಪಡುವ ಪ್ರದೇಶಗಳಲ್ಲಿ ಎಲ್ಲಾ ರೀತಿಯ ವಾಹನ ಪಾರ್ಕಿಂಗ್ ನಿμÉೀಧ ಮಾಡಲಾಗಿದೆಯೆಂದು ಪೊಲೀಸ್ ಇಲಾಖಾ ಪ್ರಕಟಣೆ ತಿಳಿಸಿದೆ.
::: ಎಲ್ಲೆಲ್ಲಿ ಪಾರ್ಕಿಂಗ್ ::: ಪಾದಯಾತ್ರೆ ಮಡಿಕೇರಿಗೆ ಮೂರ್ನಾಡು ಮಾರ್ಗವಾಗಿ ಮಡಿಕೇರಿಗೆ ಬರುವ ಹಿನ್ನೆಲೆ, ಕಗ್ಗೋಡ್ಲು ಅಂಬರ ರೆಸಾರ್ಟ್ ಮೈದಾನದಲ್ಲಿ, ಮೇಕೇರಿ ಶಾಲಾ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಭಾಗಮಂಡಲ ಕಡೆಯಿಂದ ಬರುವವರ ವಾಹನಗಳ ನಿಲುಗಡೆಎ ತಾಳತ್‍ಮನೆ ನೇತಾಜಿ ಮೈದಾನ, ಗ್ಲಾಸ್ ಬ್ರಿಡ್ಜ್ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಿದ್ದಾಪುರ, ಚೆಟ್ಟಳ್ಳಿ, ಕುಶಾಲನಗರ ವಿಭಾಗಗಳಿಂದ ಬರುವವರಿಗೆ ಚೈನ್ ಗೇಟ್ ಬಳಿಯ ಕೊಡವ ಸಮಾಜದ ಜಾಗದಲ್ಲಿ, ಆರ್‍ಎಂಸಿ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದರೆ, ಗಾಳಿಬೀಡು ವಿಭಾಗದಿಂದ ಬರುವವರಿಗೆ ಐಟಿಐ ಮೈದಾನ, ಸಂತ ಜೋಸೆಫರ ಶಾಲಾ ಮೈದಾನ ಮತ್ತು ಹೊಸ ಖಾಸಗಿ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.