
ಮಡಿಕೇರಿ ಫೆ.7 NEWS DESK : ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ಕೊಡವಾಮೆ ಬಾಳೋ’ ಕೊಡವರ ಬೃಹತ್ ಪಾದಯಾತ್ರೆ ಜಿಲ್ಲಾ ಕೇಂದ್ರ್ರ ಮಡಿಕೇರಿಯಲ್ಲಿ ಕೊಡವರು ಹಾಗೂ ಕೊಡವ ಭಾಷಿಕರ ‘ಮಹಾಸಂಗಮ’ದೊಂದಿಗೆ ಶಾಂತಿಯುತವಾಗಿ ಸಮಾರೋಪಗೊಂಡಿತು. ಶಾಂತಿಯುತ ಪಾದಯಾತ್ರೆಯ ಮೂಲಕ ಕೊಡವ ಸಮುದಾಯದ ಕೂಗನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮುಟ್ಟಿಸಲಾಯಿತು. ದಕ್ಷಿಣ ಕೊಡಗಿನ ಕುಟ್ಟದಿಂದ ಕಳೆದ ಭಾನುವಾರದಂದು ಆರಂಭಗೊಂಡ ಪಾದಯಾತ್ರೆ ಸತತ ಆರು ದಿನಗಳ ಕಾಲ 84 ಕಿ.ಮೀ. ದೂರವನ್ನು ಕ್ರಮಿಸಿತು. ಇಂದು ಮಡಿಕೇರಿಯ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬಳಿಯ ಕೊಡವ ಸಮಾಜದ ಮಂದ್‍ನಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಕೊಡವ ಸಮುದಾಯದ ಬಾಂಧವರು ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸುವ ಮೂಲಕ ಪಾದಯಾತ್ರೆಯನ್ನು ಅಂತಿಮಗೊಳಿಸಿದರು.
::: ಜನಸಾಗರ ::: ಪಾದಯಾತ್ರೆಯ ಕೊನೆಯ ದಿನವಾದ ಶುಕ್ರವಾರ ಬೆಳಗ್ಗೆ ‘ಕೊಡವಾಮೆ ಬಾಳೋ’ ಪಾದಯಾತ್ರೆ ಕಗ್ಗೋಡ್ಲುವಿನ ಶ್ರೀ ಭಗವತಿ ದೇವಸ್ಥಾನದ ಬಳಿಯಿಂದ ಬೆಳಗ್ಗೆ 10.30 ರ ಸುಮಾರಿಗೆ ಆರಂಭಗೊಂಡಿತು. ಸಾಂಪ್ರದಾಯಿಕ ಉಡುಪಿನೊಂದಿಗೆ ನಾಡಿನಾದ್ಯಂತದಿಂದ ಹರಿದು ಬಂದಿದ್ದ ಕೊಡವ ಸಮುದಾಯ ಬಾಂಧವರು ಅತ್ಯಂತ ಶಿಸ್ತಿನಿಂದ ಒಗ್ಗೂಡಿ ಹೆಜ್ಜೆ ಹಾಕಿದರು. ಮಧ್ಯಾಹ್ನ ಮಡಿಕೇರಿಯ ಜ.ತಿಮ್ಮಯ್ಯ ವೃತ್ತದಲ್ಲಿ ದುಡಿಕೊಟ್ಟ್ ಪಾಟ್, ಕೊಂಬ್ ಕಹಳೆಯೊಂದಿಗೆ, ತಳಿಯತಕ್ಕಿ ಬೊಳ್ಚ ಹಿಡಿದ ಕೊಡವ ಮಹಿಳೆಯರು ಮಡಿಕೇರಿ ಕೊಡವ ಸಮಾಜ ಮತ್ತು ಪೊಮ್ಮಕ್ಕಡ ಕೂಟದ ನೇತೃತ್ವದಲ್ಲಿ ಪಾದಯಾತ್ರೆಯನ್ನು ಸ್ವಾಗತಿಸಿದರು. ಭಾಗಮಂಡಲ, ತಾಳತ್ತಮನೆ ವಿಭಾಗಗಳಿಂದ ಆಗಮಿಸಿದ ಒಂದು ತಂಡ ವೃತ್ತಕ್ಕೆ ಆಗಮಿಸಿ, ಮುಖ್ಯ ಪಾದಯಾತ್ರೆಯನ್ನು ಸೇರ್ಪಡೆಗೊಂಡರೆ, ಮತ್ತೊಂದು ತಂಡ ಕುಶಾಲನಗರ, ಸಿದ್ದಾಪುರ ವಿಭಾಗದಿಂದ ಫೀ.ಕಾರ್ಯಪ್ಪ ವೃತ್ತದ ಬಳಿ ಸಮಾವೇಶಗೊಂಡು ಬಳಿಕ ಜನರಲ್ ತಿಮ್ಮಯ್ಯ ವೃತ್ತಕ್ಕೆ ಆಗಮಿಸಿ ಮುಖ್ಯ ಜಾಥದೊಂದಿಗೆ ಸೇರಿಕೊಂಡಿತು. ಗಾಳಿಬೀಡು ವಿಭಾಗದಿಂದ ಆಗಮಿಸಿದ ತಂಡ ಹಳೇ ಖಾಸಗಿ ಬಸ್ ನಿಲ್ದಾಣ ಬಳಿ ಪಾದಯಾತ್ರೆಯೊಂದಿಗೆ ಸೇರ್ಪಡೆಯಾಯಿತು. ಇದೇ ಸಂದರ್ಭ ಕೊಡವ ಸಂಘಟನೆಗಳ ಪ್ರಮುಖರು ನಗರದಲ್ಲಿರುವ ವೀರಸೇನಾನಿಗಳ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಕೊಡಗಿನ ಕೊಡವರ ಮತ್ತು ಕೊಡವ ಭಾಷಿಕರ ಪ್ರಮುಖ ಹಕ್ಕೊತ್ತ್ತಾಯಗಳನ್ನು ಮಂಡಿಸಿ, ಜಿಲ್ಲಾಧಿಕಾರಿ ವೆಂಕಟ್‍ರಾಜಾ ಅವರಿಗೆ ಮನವಿ ಸಲ್ಲಿಸಿದರು. ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಎಂ.ಪಿ.ಮುತ್ತಪ್ಪ, ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರತ್ಯು, ಕೊಡವ ಭಾಷಿಕರ ಒಕ್ಕೂಟದ ಅಧ್ಯಕ್ಷ ಪಡಿಞರಂಡ ಪ್ರಭು ಕುಮಾರ್ ಮತ್ತಿತರರು ಈ ಸಂದರ್ಭ ಹಾಜರಿದ್ದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, ಮನವಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಜಿಲ್ಲಾಡಳಿತದ ಮಿತಿಯಲ್ಲಿ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಶಾಂತಿಯುತವಾಗಿ ಪಾದಯಾತ್ರೆ ನಡೆಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಪ್ರಮುಖರಾದ ಮಾದೇಟಿರ ಬೆಳ್ಯಪ್ಪ ಹಾಗೂ ಮಧೋಷ್ ಪೂವಯ್ಯ ಕಾರ್ಯಕ್ರಮ ನಿರೂಪಿಸಿದರು. ಗಾಯಕ ಉಳುವಂಗಡ ಲೋಹಿತ್ ಭೀಮಯ್ಯ ಅವರು ಹಾಡಿನ ಮೂಲಕ ಪಾದಯಾತ್ರೆಯಲ್ಲಿ ಆಗಮಿಸಿದವರ ಉತ್ಸಾಹವನ್ನು ಹೆಚ್ಚಿಸಿದರು. ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ತಾರಾ ಮೆರುಗು ನೀಡಿದರು.








































