
ಮಡಿಕೇರಿ ಫೆ.10 NEWS DESK : ಜಿಲ್ಲೆಯ ಪ್ರಮುಖ ಸಹಕಾರಿ ಸಂಸ್ಥೆಯಾಗಿರುವ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ಫೆ.16 ರಂದು ನಡೆಯಲಿದ್ದು, ಸಂಘವನ್ನು ಸಹಕಾರಿ ತತ್ವದಡಿ ಸದೃಢವಾಗಿ ಬೆಳೆಸಲು ಅರ್ಹತೆಯಿರುವವರನ್ನು ಚುನಾಯಿಸುವಂತೆ ಸಂಘದ ಸದಸ್ಯ ಎಂ.ಕೆ.ಅಪ್ಪಚ್ಚು ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯರ ದೂರದೃಷ್ಟಿಯ ಫಲವಾಗಿ ಸಹಕಾರಿ ತತ್ವದಡಿ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆಯೊಂದಿಗೆ ಜಿಲ್ಲೆಯ ಕಾಫಿ ಬೆಳೆಗಾರರಿಗೆ ಭಾವನಾತ್ಮಕ ಸಂಬಂಧವಿದೆ. ಕೊಡಗಿನ ಕಾಫಿ ಉದ್ಯಮದ ಬೆಳವಣಿಗೆಗೆ ಈ ಸಂಘ ಮಹತ್ತರ ಕೊಡುಗೆ ನೀಡಿದೆ ಎಂದರು. ಕೊಡಗಿನ ಸಣ್ಣ ಬೆಳೆಗಾರರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ನೀಡದಿದ್ದ ಅವಧಿಯಲ್ಲಿ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಸಾಲ ನೀಡಿ ಕಾಫಿ ಬೆಳೆಗಾರರ ಅಭ್ಯುದಯಕ್ಕೆ ಸಹಕಾರಿಯಾಗಿತ್ತು. ಆದರೆ ಸಮರ್ಥ ಸಹಕಾರಿ ನಾಯಕತ್ವದ ಕೊರತೆ, ರಾಜಕೀಯ ಹಸ್ತಕ್ಷೇಪ ಮತ್ತು ದುರಾಡಳಿತದ ಫಲವಾಗಿ ಈ ಸಂಘ ಅವನತಿಯ ಹಾದಿಯಲ್ಲಿದೆ. 6314 ಸದಸ್ಯರಲ್ಲಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹತೆಯಿರುವುದು ಕೇವಲ 487 ಸದಸ್ಯರಿಗೆ ಮಾತ್ರ. ಸಂಘದ ಒಟ್ಟು ಸದಸ್ಯತ್ವದ ಕೇವಲ ಶೇ.8ರಷ್ಟು ಸದಸ್ಯರು ಸಂಘದ ಆಡಳಿತ ಮಂಡಳಿಯ ಭವಿಷ್ಯ ನಿರ್ಣಯಿಸುವುದು ಅಸಮಂಜಸ ಮತ್ತು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆರೋಪಿಸಿದರು.
ಈ ಬಾರಿಯ ಚುನಾವಣೆ ಅತ್ಯಂತ ನಿರ್ಣಾಯಕವಾಗಿದ್ದು, ಬೆಳೆಗಾರರು ಅರ್ಹರನ್ನು ಆಯ್ಕೆ ಮಾಡಿ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘವನ್ನು ಉಳಿಸಿ ಬೆಳೆಸಬೇಕೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯ ಟಿ.ಎಂ.ಸೋಮಯ್ಯ ಉಪಸ್ಥಿತರಿದ್ದರು.









