ಮಡಿಕೇರಿ ಫೆ.13 NEWS DESK : ದುರ್ಬಲ ವರ್ಗದ ಮತ್ತು ಬಡ ಮಂದಿಯ ಮೂಲಭೂತ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ನಡೆಸಬೇಕಾದ ದಲಿತ ಸಂಘಟನೆಗಳ ಮುಖಂಡರು, ಮಡಿಕೇರಿಯಲ್ಲಿರುವ ‘ಡಾ.ಅಂಬೇಡ್ಕರ್ ಭವನ’ದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುವುದು ಸರಿಯಲ್ಲ. ಈ ಹೋರಾಟವನ್ನು ತಕ್ಷಣ ಕೈಬಿಡಬೇಕು ಎಂದು ಕರ್ನಾಟಕ ಸಲಿತ ಸಂಘರ್ಷ ಸಮಿತಿ(ನಾಗರಾಜು ಬಣ)ಯ ರಾಜ್ಯ ಸಂಘಟನಾ ಸಂಚಾಲಕ ರಾಜಶೇಖರ್ ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸುದರ್ಶನ ವೃತ್ತದಲ್ಲಿರುವ ಡಾ.ಅಂಬೇಡ್ಕರ್ ಭವನವನ್ನು ಅಲ್ಲಿನ ಭವನ ಸಮಿತಿ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿದೆ. ಭವನವನ್ನು ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ ಉಚಿತವಾಗಿಯೂ ನೀಡುತ್ತಿದ್ದಾರೆ. ಇದರ ನಡುವೆಯೇ ಅಂಬೇಡ್ಕರ್ ಭವನದ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುವುದು ಸರಿಯಾದ ಕ್ರಮವಲ್ಲವೆಂದು ತಿಳಿಸಿದರು. ಅಂಬೇಡ್ಕರ್ ಭವನಕ್ಕೆ ಸಂಬಂಧಿಸಿದಂತೆ ಲೋಪಗಳಾಗಿದ್ದಲ್ಲಿ, ಭ್ರಷ್ಟಾಚಾರಗಳಿದ್ದರೆ ಜಿಲ್ಲಾಧಿಕಾರಿಗೆ ದೂರು ನೀಡಲಿ. ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಭ್ರಷ್ಟಾಚಾರ ಲೋಪಗಳು ಕಂಡುಬಂದರೆ ಕ್ರಮಕೈಗೊಳ್ಳುತ್ತಾರೆ. ಅದನ್ನು ಬಿಟ್ಟು ಅನಗತ್ಯವಾಗಿ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಹೋರಾಟಗಳನ್ನು ನಡೆಸಬೇಡಿ ಎಂದರು. ದಸಂಸ(ಡಿ.ಜೆ.ಸಾಗರ್ ಬಣದ) ಜಿಲ್ಲಾ ಸಂಚಾಲಕ ಎಂ.ಎನ್.ರಾಜಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹಲವು ಅಂಬೇಡ್ಕರ್ ಭವನಗಳು ಸೂಕ್ತ ನಿರ್ವಹಣೆ ಇಲ್ಲದೆ ಮೂಲೆಗುಂಪಾಗಿವೆ. ಅಂತಹ ಭವನಗಳ ಅಭಿವೃದ್ಧಿಗಾಗಿ ಹೋರಾಟ ಮಾಡಲು ದಲಿತ ಸಂಘಟನೆಗಳು ಮುಂದಾಗಲಿ ಎಂದು ತಿಳಿಸಿದರು. ಡಾ.ಅಂಬೇಡ್ಕರ್ ಅವರು ರಾಷ್ಟ್ರಕ್ಕೆ ನೀಡಿರುವ ಸಂವಿಧಾನವನ್ನೆ ಬದಲಿಸುವುದಾಗಿ ಹೇಳುತ್ತಿರುವ ಸಂದಿಗ್ಧ ಕಾಲ ಘಟ್ಟದಲ್ಲಿ, ಅಪಾಯದ ಅಂಚಿನಲ್ಲಿರುವ ಸಂವಿಧಾನದ ಸಂರಕ್ಷಣೆಯಂತಹ ಜವಾಬ್ದಾರಿಗಳನ್ನು ದಲಿತ ಸಂಘಟನೆಗಳು ಹೊರಬೇಕು. ದಲಿತ ಸಮುದಾಯದವರ ಮೇಲಿನ ನಿರಂತರ ದೌರ್ಜನ್ಯ, ಕಸ್ತೂರಿ ರಂಗನ್ ವರದಿಯ ಆತಂಕ, ಫಾರಂ ನಂ 53, 57 ನ್ನು ಅನುಷ್ಟಾನಗೊಳಿಸಿ ಬಡಮಂದಿಗೆ ಜಾಗ ನೀಡುವ ವಿಚಾರಗಳು ದಲಿತ ಸಂಘಟನೆಗಳಿಗೆ ಪ್ರಮುಖವಾಗಬೇಕಾಗಿದೆ ಎಂದರು. ಜಿಲ್ಲಾ ಸಂಘಟನಾ ಸಂಚಾಲಕ ಎನ್.ಆರ್.ದೇವರಾಜು ಮಾತನಾಡಿ ಅಂಬೇಡ್ಕರ್ ಭವನ ಎಲ್ಲಾ ವರ್ಗದವರಿಗೂ ಉಪಯೋಗಕ್ಕೆ ಸಿಗುತ್ತಿದೆ. ಹೀಗಿರುವಾಗ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ. ಇಂತಹ ಹೋರಾಟಗಳನ್ನು ಕೈಬಿಟ್ಟು ದಲಿತರ, ಬಡವರ ನೈಜ ಸಮಸ್ಯೆಗಳ ಬಗ್ಗೆ ಪ್ರತಿಭಟನೆ ನಡೆಸಲಿ ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಂಘಟನಾ ದಸಂಸ(ಸಾಗರ್ ಬಣ)ದ ಸಂಚಾಲಕ ಎಸ್.ಜೆ.ರಾಜಪ್ಪ, ಖಜಾಂಚಿ ಹೆಚ್.ಆರ್.ವೀರಭದ್ರ ಹಾಗೂ ಸದಸ್ಯ ಹೆಚ್.ಬಿ.ಗಿರೀಶ್ ಉಪಸ್ಥಿತರಿದ್ದರು.











