


ಮಡಿಕೇರಿ ಫೆ.13 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಮಹಿಳಾ ಸಹಾಯವಾಣಿ ಇವರ ಸಹಯೋಗದೊಂದಿಗೆ 2024-25 ನೇ ಸಾಲಿನ ಮಿಶನ್ ಶಕ್ತಿ ಯೋಜನೆಯಡಿ “ಬೇಟಿ ಬಚಾವೊ-ಬೇಟಿ ಪಡಾವೊ” ತಾಲ್ಲೂಕು ಮಟ್ಟದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, “ಸಮಗ್ರ ಮಕ್ಕಳ ಲೈಂಗಿಕ ಶಿಕ್ಷಣದ ಕುರಿತು” ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಹಿರಿಯ ಮೇಲ್ವಿಚಾರಕಿ ಸಾವಿತ್ರವ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತಾಯಿಯ ಗರ್ಭದಿಂದ 18 ವರ್ಷದವರೆಗೆ ಮಕ್ಕಳು ಎಂದು ಹೇಳಲಾಗುತ್ತದೆ. ಮಕ್ಕಳು ಉತ್ತಮ ಆರೋಗ್ಯವನ್ನು ಪಡೆಯಬೇಕಾದರೆ ಉತ್ತಮ ಪೌಷ್ಠಿಕಯುಕ್ತ ಆಹಾರವನ್ನು ಸೇವಿಸಬೇಕು. ಸರ್ಕಾರ ಇಂದು ಮಕ್ಕಳ ಆರೋಗ್ಯ, ದೈಹಿಕ ಬೆಳವಣಿಗೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಮಕ್ಕಳು ಶಿಕ್ಷಣವನ್ನು ಪಡೆಯುವುದರ ಮೂಲಕ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಹಾಗೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೂಲಕ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು, ಹೆಣ್ಣು ಮಕ್ಕಳು ಶಿಕ್ಷಣವಂತರಾಗಲು ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪೊಲೀಸ್ ಇಲಾಖೆಯ ಪ್ರದೀಪ್ ಕುಮಾರ್ ಕೆ.ಎಂ., ಅವರು ಮಾತನಾಡಿ ಪ್ರಸ್ತುತ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಕ್ಕಳು ಸಾಮಾಜಿಕ ಜಾಲತಾಣಗಳ ಬಗ್ಗೆ ಆಸಕ್ತಿ ತೋರಬಾರದು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಕ್ಕಳು ಶಾಲೆಗಳಿಗೆ ತೆರಳುವಂತಹ ಸಮಯದಲ್ಲಿ ನೆರಹೊರೆಯವರಿಂದ, ಬಸ್ಸಿನಲ್ಲಿ ಪ್ರಯಾಣಿಸುವಾಗ ಯಾರಾದರು ಲೈಂಗಿಕ ಕಿರುಕುಳದಂತಹ ದೌರ್ಜನ್ಯ ಎಸಗಿದ್ದಲ್ಲಿ ಮಕ್ಕಳು ತಮ್ಮೊಂದಿಗೆ ಅತ್ಯಂತ ಉತ್ತಮ ಒಡನಾಟ ಇರುವಂತಹವರೊಂದಿಗೆ ಸಮಸ್ಯೆಗಳನ್ನು ಹೇಳಿಕೊಂಡು ಅಥವಾ 1098 ಮಕ್ಕಳ ಸಹಾಯವಾಣಿಗೆ ಕರೆಮಾಡಿ ಸಮಸ್ಯೆಯನ್ನು ಹೇಳಿಕೊಳ್ಳಬಹುದು. ಅಲ್ಲದೆ 112 ಪೊಲೀಸ್ ತುರ್ತು ಸೇವೆಗೆ ಕರೆಮಾಡಿ ಮಾಹಿತಿಯನ್ನು ನೀಡಬಹುದು ಎಂದು ಹೇಳಿದರು. ಭಾರತಿ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ನರಸಿಂಹ ಮೂರ್ತಿ ಅವರು ಮಾತನಾಡಿ ನಮ್ಮ ಶಾಲೆಯ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ಹದಿಹರೆಯದ ವಯಸ್ಸಿಲ್ಲಿ ಮಕ್ಕಳ ಮನಸ್ಸು ಹಾಗೂ ದೈಹಿಕ ಬದಲಾವಣೆಗಳ ಮೇಲಾಗುವ ವಿಚಾರಗಳ ಕುರಿತು ತಿಳಿಸಿ ಹೇಳಿ, ಶಿಕ್ಷಣದ ಕಡೆ ಗಮನಹರಿಸಿ ಯಶಸ್ಸು ಸಾಧಿಸಬೇಕು ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮಹಿಳಾ ಸಬಲೀಕರಣ ಘಟಕದ, ಜೆಂಡರ್ ಸ್ಪ್ಪೆಷಲಿಸ್ಟ್, ಕೇಶಿನಿ ಎಸ್.ಆರ್, ಮಹಿಳಾ ಸಬಲೀಕರಣ ಘಟಕದ ಮಿಷನ್ ಜಿಲ್ಲಾ ಮಿಷನ್ ಸಂಯೋಜಕರಾದ ಮಮತ ಬಿ.ಎಸ್. ಹಾಗೂ ಭಾರತಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು. ಶಾಲಾ ಮತ್ತು ಕಾಲೇಜಿನ ಮಕ್ಕಳಿಗೆ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.ಮಧು ಅವರು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.