ಮಡಿಕೇರಿ ಫೆ.13 NEWS DESK : 14 ದಿನಗಳ ಹಸುಗೂಸನ್ನು ಹೊಂದಿರುವ ಬಾಣಂತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಕೊಟ್ಟೋಳಿ ಗ್ರಾಮದಲ್ಲಿ ನಡೆದಿದೆ. ಕೊಟ್ಟೋಳಿ ಗ್ರಾಮದ ನಿವಾಸಿ ಎಂ.ಎಂ.ದಿನೇಶ್ ಎಂಬುವವರ ಪತ್ನಿ, ಕರಡ ಗ್ರಾಮದ ದಿ.ಕಟ್ಟಿ ಬಿದ್ದಪ್ಪ ಹಾಗೂ ಶೀಲಾ ದಂಪತಿಯ ಪುತ್ರಿ ಕಾವೇರಮ್ಮ (24) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಕೊಟ್ಟೋಳಿ ನಿವಾಸಿ ದಿನೇಶ್ ಹಾಗೂ ಕಾವೇರಮ್ಮ ಅವರು ವಿವಾಹವಾಗಿ ನಾಲ್ಕು ವರ್ಷಗಳಷ್ಟೆ ಕಳೆದಿದೆ. ಮನೆಯಲ್ಲಿ ಪತಿ ಹಾಗೂ ಅತ್ತೆ ಇಲ್ಲದ ಸಂದರ್ಭ ಸಾಧಿಸಿ ಕಾವೇರಮ್ಮ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.










