![](https://newsdeskkannada.com/wp-content/uploads/2025/02/Z-ND-ADVT-16.jpg)
![](https://newsdeskkannada.com/wp-content/uploads/2025/02/Z-ADVT-TEACHERS-10.jpg)
![](https://newsdeskkannada.com/wp-content/uploads/2025/02/Z-SRI-SAI-INSURENCE-8.jpg)
ಮಡಿಕೇರಿ ಫೆ.15 NEWS DESK : ಮೈಕ್ರೋಫೈನಾನ್ಸ್ ಗಳಿಂದ ಸಾಲಪಡೆದವರಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಲು ಸರ್ಕಾರ ಸುಗ್ರೀವಾಜ್ಞೆಯನ್ನು ಜಾರಿಗೆ ತಂದು ಕೆಲವು ನಿಯಮಗಳನ್ನು ರೂಪಿಸಿರುವುದು ಸ್ವಾಗತಾರ್ಹ. ಆದರೆ ಈ ನಿಯಮಗಳ ಅನುಷ್ಠಾಕ್ಕೂ ಮೊದಲು ಬಡವರು ಪಡೆದುಕೊಂಡಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಿ ಎಂದು ಯುವ ಜಾತ್ಯತೀತ ಜನತಾದಳದ ಕೊಡಗು ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಮೈಕ್ರೋಫೈನಾನ್ಸ್ ಗಳ ಕಿರುಕುಳಕ್ಕೆ ಅಂಕುಶ ಹಾಕುವುದಾಗಿ ಹೇಳಿಕೊಂಡಿದೆ. ಆದರೆ ಸರ್ಕಾರದ ಘೋಷಣೆಯ ನಂತರವೂ ಮೈಕ್ರೋಫೈನಾನ್ಸ್ ನ ಸಿಬ್ಬಂದಿಗಳು ಸಾಲ ಪಡೆದವರ ಮನೆಗಳಿಗೆ ತೆರಳಿ ಸಾಲದ ಮೊತ್ತ ಪಾವತಿಸುವಂತೆ ಒತ್ತಡ ಹೇರುತ್ತಿರುವುದು ಕಂಡು ಬಂದಿದೆ. ಬಡವರ ಮೇಲೆ ಸರ್ಕಾರಕ್ಕೆ ನೈಜ ಕಾಳಜಿ ಇದ್ದರೆ ಮೊದಲು ಸಾಲಮನ್ನಾ ಮಾಡಲಿ, ನಂತರ ಕಾನೂನು ಕ್ರಮದ ಪ್ರಕ್ರಿಯೆಯನ್ನು ಆರಂಭಿಸಲಿ ಎಂದು ತಿಳಿಸಿದ್ದಾರೆ. ಕೊಡಗು ಜಿಲ್ಲೆಯ ಶನಿವಾರಸಂತೆಯಲ್ಲಿ ಸಾಲದಬಾಧೆ ತಾಳಲಾರದೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲವು ಭಾಗಗಳಲ್ಲಿ ಸಾಲಗಾರರ ಕಿರುಕುಳದಿಂದ ಬೇಸತ್ತು ಊರು ಬಿಟ್ಟವರೂ ಇದ್ದಾರೆ. ಅಧಿಕ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರೇ ಸಾಲ ಪಡೆದಿದ್ದು, ಬಡ್ಡಿ ಸಹಿತ ಅಸಲು ಪಾವತಿಸಲಾಗದೆ ಪರದಾಡುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಮತ್ತು ವಿವಾಹ ಮಾಡಲು ಹೆಚ್ಚಿನವರು ಸಾಲ ಮಾಡಿಕೊಂಡಿದ್ದು, ಬಡ್ಡಿಯ ಮೊತ್ತ ಏರುತ್ತಲೇ ಇದೆ. ಸರ್ಕಾರದ ನಿಯಮಗಳು ಜಾರಿಯಾಗಲು ಒಂದಷ್ಟು ದಿನಗಳು ಬೇಕಾಗಬಹುದು, ಜಾರಿಯಾದರೂ ಬಡವರು ಹಾಗೂ ಕೂಲಿ ಕಾರ್ಮಿಕರು ಸಾಲದಿಂದ ಮುಕ್ತರಾಗಲು ಸಾಧ್ಯವಾಗುವುದಿಲ್ಲ. ಪಾವತಿಸಬೇಕಾದ ಹಣವನ್ನು ಮೈಕ್ರೋಫೈನಾನ್ಸ್ ಗಳಿಗೆ ಪಾವತಿಸಲೇಬೇಕಾಗುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರು ತತ್ತರಿಸಿ ಹೋಗಿದ್ದಾರೆ. ಹೊರ ರಾಜ್ಯಗಳ ಕಾರ್ಮಿಕರ ಬಳಕೆ, ತೋಟಗಳಲ್ಲಿ ವನ್ಯಜೀವಿಗಳ ಹಾವಳಿ ಮತ್ತು ಹವಾಗುಣದ ವೈಪರೀತ್ಯದಿಂದ ಸ್ಥಳೀಯ ಕಾರ್ಮಿಕರು ವಾರದ ಆರೂ ದಿನವೂ ದುಡಿದು ಸಂಪಾದಿಸಲು ಸಾಧ್ಯವಾಗುತ್ತಿಲ್ಲ. ಅಲ್ಪಪ್ರಮಾಣದ ಸಂಪಾದನೆಯಲ್ಲಿ ಮನೆ ನಿರ್ವಹಣೆ, ಮಕ್ಕಳ ಶಿಕ್ಷಣ, ವಿವಾಹ ಮತ್ತು ಆರೋಗ್ಯವನ್ನು ನೋಡಿಕೊಳ್ಳಬೇಕಾಗಿದೆ. ಇಂದು ಪ್ರತಿಯೊಂದು ವಸ್ತುವಿನ ಬೆಲೆಯು ದುಬಾರಿಯಾಗಿದ್ದು, ಆದಾಯ ಕಡಿಮೆಯಾಗಿದೆ. ಇದೇ ಕಾರಣದಿಂದ ಬಡವರು ಹಾಗೂ ಕೂಲಿ ಕಾರ್ಮಿಕರು ಮೈಕ್ರೋಫೈನಾನ್ಸ್ ಗಳಿಂದ ಬಡ್ಡಿಗೆ ಸಾಲ ಪಡೆದುಕೊಂಡಿದ್ದಾರೆ. ಬಡ್ಡಿ ಬೆಳೆಯುತ್ತಲೇ ಇದ್ದು, ಸಾಲ ಪಡೆದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ನೀಡಿದವರು ರಾತ್ರಿ ಹಗಲೆನ್ನದೆ ಸಾಲ ವಸೂಲಾತಿಗೆ ಮನೆ ಬಾಗಿಲಿಗೆ ಹೋಗುತ್ತಿದ್ದಾರೆ. ಇದರಿಂದ ಮನನೊಂದ ಕುಟುಂಬಗಳು ಕೆಟ್ಟ ನಿರ್ಧಾರಗಳನ್ನು ಮಾಡುವ ಸಾಧ್ಯತೆಗಳಿದೆ. ಆದ್ದರಿಂದ ಪ್ರಸ್ತುತ ಪಡೆದು ಆಗಿರುವ ಬಡವರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಮೂಲಕ ಮೈಕ್ರೋಫೈನಾನ್ಸ್ ಗಳಿಗೆ ಆಗುವ ನಷ್ಟವನ್ನು ಸರ್ಕಾರವೇ ತುಂಬಬೇಕು. ಆ ಮೂಲಕ ಬಡವರ ನೆರವಿಗೆ ಸರ್ಕಾರ ಬರಬೇಕು ಎಂದು ಸಿ.ಎಲ್.ವಿಶ್ವ ಒತ್ತಾಯಿಸಿದ್ದಾರೆ.