![](https://newsdeskkannada.com/wp-content/uploads/2025/02/Z-ND-ADVT-16.jpg)
![](https://newsdeskkannada.com/wp-content/uploads/2025/02/Z-ADVT-TEACHERS-10.jpg)
![](https://newsdeskkannada.com/wp-content/uploads/2025/02/Z-SRI-SAI-INSURENCE-8.jpg)
ಪೊನ್ನಂಪೇಟೆ ಫೆ.15 NEWS DESK : ಚೇತನ ಫೌಂಡೇಶನ್ ಕರ್ನಾಟಕ ಇವರ ವತಿಯಿಂದ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳ ಶೈಕ್ಷಣಿಕ ಉತ್ತೇಜನಕ್ಕಾಗಿ ಶ್ರಮಿಸಿದವರಿಗೆ ನೀಡಲಾಗುವ ‘ಶ್ರೀಕೃಷ್ಣರಾಜ ಒಡೆಯರ್ ಸದ್ಭಾವನಾ’ ಪ್ರಶಸ್ತಿಗೆ ಬೇಟೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಗುಂಡಿಕೆರೆ ಕೊಟ್ಟೋಳಿ ಗ್ರಾಮದ ಮೀತಲತಂಡ ಎಂ. ಇಸ್ಮಾಯಿಲ್ ಆಯ್ಕೆಯಾಗಿದ್ದಾರೆ. ಚೇತನ ಫೌಂಡೇಶನ್ ಕರ್ನಾಟಕದ ಆಶ್ರಯದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ.) ಕರ್ನಾಟಕ ಇವರ ಸಹಯೋಗದಲ್ಲಿ ಇದೇ ತಿಂಗಳ 16ರಂದು ಭಾನುವಾರ ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಭವನದ ಸಭಾಂಗಣದಲ್ಲಿ ನಡೆಯಲಿರುವ ‘ಮೈಸೂರು ನುಡಿ ಸಡಗರ’ ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಅವರಿಗೆ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು. ವಿರಾಜಪೇಟೆ ತಾಲೂಕಿನ ಗುಂಡಿಕೆರೆಯಲ್ಲಿರುವ ಬೇಟೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಇಸ್ಮಾಯಿಲ್, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿ ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸಿದವರಾಗಿದ್ದಾರೆ. ಅಲ್ಲದೆ ಊರಿನ ದಾನಿಗಳ ನೆರವಿನಿಂದ ಶಾಲಾಭಿವೃದ್ಧಿ ಸಮಿತಿ ವತಿಯಿಂದ 2016ರಲ್ಲಿ ವಿರಾಜಪೇಟೆ ತಾಲೂಕಿನಲ್ಲೇ ಪ್ರಥಮ ಬಾರಿಗೆ ಬೇಟೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗವನ್ನು ಆರಂಭಿಸುವಲ್ಲಿ ಇಸ್ಮಾಯಿಲ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯ ಬಾಲಕಿಯರ ವಾಲಿಬಾಲ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆಗೊಂಡು ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುವಲ್ಲಿಯೂ ಇಸ್ಮಾಯಿಲ್ ಅವರು ನಿರ್ವಹಿಸಿದ ಪಾತ್ರ ಅಪಾರವಾಗಿತ್ತು. ಕೆದಮುಳ್ಳೂರು ಗ್ರಾಮ ಪಂಚಾಯಿತಿಗೆ ಸತತವಾಗಿ ಮೂರನೇ ಬಾರಿಗೆ ಚುನಾಯಿತರಾಗಿರುವ ಎಂ. ಎಂ. ಇಸ್ಮಾಯಿಲ್ ತಮ್ಮ ಸಮಾಜಮುಖಿ ಕಾರ್ಯ ಚಟುವಟಿಕೆಗಳಿಂದ ಜನಾನುರಾಗಿದ್ದಾರೆ.
ಕೆಎಂಎ ಸಂತಸ :: ಕೊಡವ ಮುಸ್ಲಿಂ ಅಸೋಸಿಯೇಷನ್ ನ ಕಾರ್ಯಕಾರಿ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿರುವ ಇಸ್ಮಾಯಿಲ್ ಅವರು ರಾಜ್ಯಮಟ್ಟದ ಶ್ರೀ ಕೃಷ್ಣರಾಜ ಒಡೆಯರ್ ಸದ್ಭಾವನಾ ಪ್ರಶಸ್ತಿಗೆ ಆಯ್ಕೆಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ, ಸಂಘಟನೆಯಲ್ಲಿ ಕ್ರಿಯಾಶೀಲರಾಗಿರುವ ಇಸ್ಮಾಯಿಲ್ ಅವರು ಸಂಘಟನಾ ಚತುರರಾಗಿದ್ದು, ಸಾಮಾಜಿಕ ಕಳಕಳಿಯನ್ನು ಹೊಂದಿದವರಾಗಿದ್ದಾರೆ. ತಮ್ಮ ಚಿಕ್ಕಪ್ರಾಯದಿಂದಲೇ ಹಲವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಚಿಂತನೆಯ ವ್ಯಕ್ತಿತ್ವವನ್ನು ಹೊಂದಿರುವ ಇಸ್ಮಾಯಿಲ್ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅದರ ಮೌಲ್ಯ ಮತ್ತಷ್ಟು ಹೆಚ್ಚಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.