



ಮಡಿಕೇರಿ NEWS DESK ಫೆ.16 : ಕೊಡಗು ಜಿಲ್ಲಾ ವ್ಯಾಪ್ತಿಯ ವಿವಾಹ ಸಮಾರಂಭಗಳಲ್ಲಿ ಮದ್ಯ ಬಳಕೆಗೆ ಒಂದು ದಿನದ ಸನ್ನದು ಪಡೆಯಬೇಕು ಎಂದು ಅಬಕಾರಿ ಇಲಾಖೆ ಹೊರಡಿಸಿರುವ ಹೊಸ ಆದೇಶಕ್ಕೆ ವಿರಾಜಪೇಟೆ ಬಿಜೆಪಿ ಮಂಡಲ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ವಿರಾಜಪೇಟೆ ಬಿಜೆಪಿ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ವಿನಾಕಾರಣ ಹೊಸ ಹೊಸ ಆದೇಶಗಳ ಮೂಲಕ ಕೊಡಗಿನ ಸಂಪ್ರದಾಯಗಳಿಗೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಕೊಡಗು ಜಿಲ್ಲೆಯಲ್ಲಿ ವಿವಾಹ ಸಮಾರಂಭಗಳು ನಡೆದಿದೆ. ಸಂಪ್ರದಾಯದಂತೆ ಎಲ್ಲೂ ಎಲ್ಲೆ ಮೀರದೆ, ಅಪರಾಧಗಳಿಗೆ ಅವಕಾಶ ನೀಡದೆ ಮತ್ತು ಸಾರ್ವಜನಿಕವಾಗಿ ಅಶಾಂತಿ ಮೂಡಿಸದೆ ಶಿಸ್ತುಬದ್ಧವಾಗಿ ಮದ್ಯವನ್ನು ಬಳಸಲಾಗಿದೆ. ಆದರೆ ಇದೀಗ ರಕ್ಷಣಾ ಮದ್ಯ, ಹೊರ ರಾಜ್ಯದ ಮದ್ಯ, ನಕಲಿ ಮದ್ಯ, ಅಕ್ರಮ ಮದ್ಯ ಸರಬರಾಜಾಗುತ್ತಿರುವ ಬಗ್ಗೆ ದೂರು ಬಂದಿದೆ ಎಂಬ ನೆಪವೊಡ್ಡಿ ಸನ್ನದು ಪಡೆಯಬೇಕೆನ್ನುವ ನಿಯಮ ಜಾರಿ ಮಾಡಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ವಿವಾಹ ಸಮಾರಂಭದಲ್ಲಿ ಗುರುಕಾರೋಣರಿಗೆ ಹಾಗೂ ಹಿರಿಯರಿಗೆ ಮೀದಿ ಇಡುವ ಪದ್ಧತಿ ಇದೆ. ಈ ಸಂದರ್ಭ ಮದ್ಯವನ್ನು ಕೂಡ ಇಡಲಾಗುತ್ತದೆ. ತಲೆತಲಾಂತರಗಳಿಂದ ಕೊಡಗಿನ ಸಂಪ್ರದಾಯ ಅಥವಾ ಪರಂಪರೆಯ ಒಂದು ಭಾಗವಾಗಿ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಇಲ್ಲಿಯವರೆಗಿನ ಯಾವುದೇ ಸರ್ಕಾರಗಳು ಅಡ್ಡಿಪಡಿಸಿಲ್ಲ. ಆದರೆ ಇದೀಗ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ಮೂಲಕ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಡಗಿನ ದೇವಾಲಯಗಳಲ್ಲಿ ಸಂಪ್ರದಾಯಬದ್ಧವಾಗಿ ಇಡಲಾಗುತ್ತಿದ್ದ ವನ್ಯಜೀವಿಗಳ ವಸ್ತುಗಳನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸುವಂತೆ ಕೆಲವು ತಿಂಗಳುಗಳ ಹಿಂದೆ ಆದೇಶ ಹೊರಡಿಸಿದ ಸರ್ಕಾರ ನಂತರದ ದಿನಗಳಲ್ಲಿ ಕಾಫಿ ತೋಟಗಳಲ್ಲಿ ಬೆಳೆಗಾರರು ಬೆಳೆಸಿದ ಮರಗಳ ಸರ್ವೆ ಕಾರ್ಯಕ್ಕೆ ಮುಂದಾಗಿತ್ತು. ಇದೀಗ ಕೊಡಗಿನ ವಿವಾಹ ಸಮಾರಂಭಗಳ ಮೇಲೆ ತನ್ನ ಆದೇಶದ ಅಸ್ತçವನ್ನು ಪ್ರಯೋಗಿಸಿದೆ ಎಂದು ತಿಳಿಸಿರುವ ರಾಕೇಶ್ ದೇವಯ್ಯ, ತಕ್ಷಣ ಅಬಕಾರಿ ಇಲಾಖೆ ತನ್ನ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.