



ಸೋಮವಾರಪೇಟೆ NEWS DESK ಫೆ.24 : ಕೊಡಗು ವಿಶ್ವವಿದ್ಯಾನಿಲಯ ಮುಚ್ಚುವ ಸರ್ಕಾರದ ಕ್ರಮ ಖಂಡನೀಯ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ದಶಕಗಳ ಕೊಡಗು ವಿ.ವಿ ಕನಸನ್ನು ಈ ಹಿಂದಿನ ಸರ್ಕಾರ ಸಾಕಾರಗೊಳಿಸಿದೆ. ಯಾವುದೇ ಸರ್ಕಾರವಾದರು ಅನುದಾನ ಒದಗಿಸಿ ಅವುಗಳನ್ನು ಉಳಿಸಿಕೊಳ್ಳಬೇಕಾಗಿರುವುದು ಅದರ ಕರ್ತವ್ಯ, ಅನುದಾನ ನೀಡದೆ ವಿ.ವಿ ಮುಚ್ಚುವ ಕ್ರಮ ಸರಿಯಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಲವಾರು ವರ್ಷಗಳಿಂದ ಕೊಡಗಿನ ವಿದ್ಯಾರ್ಥಿಗಳು ಮಂಗಳೂರು ವಿ.ವಿ.ಯನ್ನು ಅವಲಂಬಿಸಿ ಹೈರಾಣಾಗಿದ್ದಾರೆ ಎಂದಿರುವ ಅವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಕೊಡಗು ಜಿಲ್ಲೆ ಈ ವಿ.ವಿ.ಪ್ರಾರಂಭದಿಂದಾಗಿ ಅಭಿವೃದ್ಧಿಯ ಹೊಸ ಚಿಗುರು ಕಂಡಂತಾಗಿತ್ತು ಆದರೆ ಸರ್ಕಾರದ ಈ ಕ್ರಮದಿಂದಾಗಿ ಜಿಲ್ಲೆಯ ಜನತೆಯ ಕನಸಿಗೆ ತಣ್ಣೀರೆರೀಚಿದಂತಾಗಿದೆ ಎಂದಿದ್ದಾರೆ. ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು, ಲೋಕಸಭಾ ಸದಸ್ಯರು ಪಕ್ಷಾತೀತವಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಕೊಡಗು ವಿವಿ ಯನ್ನ ಉಳಿಸಿಕೊಳ್ಳುವುದರೊಂದಿಗೆ ಮುಂದಿನ ಬಜೆಟ್ ನಲ್ಲಿ ಅನುದಾನ ಒದಗಿಸಲು ಶ್ರಮವಹಿಸಬೇಕೆಂದು ಮಹೇಶ್ ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯವೆಂದು ಎಚ್ಚರಿಕೆ ನೀಡಿದ್ದಾರೆ.