ಮಡಿಕೇರಿ NEWS DESK ಮಾ.2 : ವಿಭಿನ್ನ ನಿರೂಪಣಾ ಶೈಲಿ, ಪಾತ್ರ ಪೋಷಣೆ ಮತ್ತು ಕೊಡಗಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಥಾ ವಸ್ತುವಿನ ಚಲನಚಿತ್ರಗಳನ್ನು ನಿರ್ದೇಶಿಸುವ ಮೂಲಕ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ವರೆಗೂ ಸಿನಿ ಹೆಜ್ಜೆಯನ್ನು ಬೆಳೆಸಿ ಸಿನಿಮಾರಂಗದಲ್ಲಿ ಕೊಡಗಿನ ಪ್ರತಿಭೆಗಳ ಇರುವಿಕೆಯನ್ನು ಸಾಕ್ಷೀಕರಿಸಿದ ಪ್ರಶಸ್ತಿ ವಿಜೇತ ನಿರ್ದೇಶಕ, ನಟ ಹಾಗೂ ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರ “ಕಾಂಗತ ಮೂಡ್ (ದಿ ಶ್ಯಾಡೋ)” ಕೊಡವ ಚಲನಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಕೂರ್ಗ್ ಕಾಫಿವುಡ್ ಮೂವಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ಮಿಸಿ, ನಿರ್ದೇಶಿಸಿರುವ ಕೊಡವ ಚಲನಚಿತ್ರ “ಕಾಂಗತ ಮೂಡ್”(“(The Shadow) 16ನೇ ಚಲನಚಿತ್ರೋತ್ಸವದ ಕನ್ನಡ ಸ್ಪರ್ಧಾ ವಿಭಾಗದಲ್ಲಿ ಆಯ್ಕೆಯಾಗಿದೆ. ಬೆಂಗಳೂರಿನ ರಾಜಾಜಿನಗರದ ಒರೆಯನ್ ಮಾಲ್ ನಲ್ಲಿ ಮಾರ್ಚ್ 1 ರಿಂದ 8ರ ವರೆಗೆ ನಡೆಯುತ್ತಿರುವ ಚಲನಚಿತ್ರೋತ್ಸವದಲ್ಲಿ “ಕಾಂಗತ ಮೂಡ್” ಎರಡು ಪ್ರದರ್ಶನ ಕಾಣಲಿದೆ. ಮಾ.2 ರಂದು ಮಧ್ಯಾಹ್ನ 3 ಗಂಟೆಗೆ ರಾಜ್ ಕುಮಾರ್ ಭವನ್ ಮತ್ತು ಮಾ.6ರಂದು ಮಧ್ಯಾಹ್ನ 12.45ಕ್ಕೆ ಒರೆಯನ್ ಮಾಲ್ ನಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿಶ್ವದಾದ್ಯಂತದಿಂದ 800 ಕ್ಕೂ ಅಧಿಕ ಚಿತ್ರಗಳು ಬಂದಿದ್ದು, 200 ಚಿತ್ರಗಳು ಆಯ್ಕೆಯಾಗಿವೆ. ಇವುಗಳಲ್ಲಿ “ಕಾಂಗತ ಮೂಡ್ (ದಿ ಶ್ಯಾಡೋ)” ಕೂಡ ಸೇರಿರುವುದು ಹೆಮ್ಮೆ ಎನಿಸಿದೆ ಎಂದು ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಚಿತ್ರಕ್ಕೆ ಪ್ರಕಾಶ್ ಕಾರ್ಯಪ್ಪ ಅವರ ಪತ್ನಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಸಹ ನಿರ್ಮಾಪಕಿಯಾಗಿದ್ದು, ಚಿತ್ರದ ಕಥೆ, ನಿರ್ಮಾಣ, ನಿರ್ದೇಶನದ ಜವಾಬ್ದಾರಿಯನ್ನು ಪ್ರಕಾಶ್ ಕಾರ್ಯಪ್ಪ ಅವರು ನಿರ್ವಹಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಚೆಡಿಯಂಡ ಸಂತೋಷ್ ಮೇದಪ್ಪ ಹಾಗೂ ಅಪ್ಪಂಡೇರಂಡ ತೇಜು ಪೊನ್ನಪ್ಪ, ಅತಿಥಿ ಪಾತ್ರದಲ್ಲಿ ಅನಂತಶಯನ, ಗುಮ್ಮಟ್ಟಿರ ಕಿಶು ಉತ್ತಪ್ಪ, ಬೊಳ್ಳಜಿರ ಬಿ.ಅಯ್ಯಪ್ಪ, ಅಜ್ಜಮಕ್ಕಡ ವಿನು ಕುಶಾಲಪ್ಪ ನಟಿಸಿದ್ದಾರೆ. ಉಳಿದಂತೆ ಅಮ್ಮಾಟಂಡ ದೇವಯ್ಯ, ವಿಂದ್ಯ ದೇವಯ್ಯ, ತಂಬುಕುತ್ತೀರಾ ಚರಣ್, ಸಿದ್ದಂಡ ಶಂಭು, ದೇವಂಡಿರ ಲೋಕೇಶ್, ಮಡೆಯಂಡ ಸೂರಜ್, ಮಡೆಯಂಡ ಪ್ರೀನಾ ನಟಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಗಾರ್ಗಿ ಕಾರೆಹಕ್ಲು, ಪ್ರದೀಪ್ ಆರ್ಯನ್, ಈರಮಂಡ ಹರಿಣಿ ವಿಜಯ್, ಚೋಕಂಡ ದಿನು ನಂಜಪ್ಪ, ಟಿ.ಮುತ್ತುರಾಜು, ಯದುನಂದನ್, ನೀಲ್ ನಾಗರಾಜ್, ನಿಖಿಲ್ ಕಾರ್ಯಪ್ಪ, ರಿಕ್ತಿ ನಿರಂಜನ್, ಈರಮಂಡ ವಿಜಯ್ ಉತ್ತಯ್ಯ, ಬೊಳ್ಳಜಿರ ಬಿ.ಅಯ್ಯಪ್ಪ, ಮೇಘರಾಜ್, ಕೊಚ್ಚೆರ ನರೇನ್ ಬಿದ್ದಪ್ಪ ಸೇರಿದಂತೆ ಮುಂತಾದವರು ಕಾರ್ಯನಿರ್ವಹಿಸಿದ್ದಾರೆ. *ಕಥಾ ಸಾರಾಂಶ* ಕಾಫಿ ತೋಟದಲ್ಲೇ ಜೀವನ ಆರಂಭಿಸುವ ಬಾಲಕನೋರ್ವ ಶಿಕ್ಷಣದಿಂದ ವಂಚಿತನಾಗಿ ಹೊರ ಜಗತ್ತಿನ ಪರಿಚಯವಿಲ್ಲದೆ ಬೆಳೆಯುತ್ತಲೇ ದುಶ್ಚಟಗಳಿಗೆ ದಾಸನಾಗುತ್ತಾನೆ. ತೋಟದ ಮಾಲೀಕನ ಒಡನಾಟದ ನಡುವೆಯೂ ತನ್ನ ಭವಿಷ್ಯದ ನಿರ್ಧಾರದಲ್ಲಿ ಎಡವಿ ಹಾದಿ ತಪ್ಪುವ ಯುವಕ ದುರಂತ ಅಂತ್ಯ ಕಾಣುವ ಕಥೆಯನ್ನು “ಕಾಂಗತ ಮೂಡ್ (ದಿ ಶ್ಯಾಡೋ)” ಚಿತ್ರದಲ್ಲಿ ನಿರೂಪಿಸಲಾಗಿದೆ. ಇದೊಂದು ನೈಜತೆಯಿಂದ ಕೂಡಿದ ಕಥಾವಸ್ತುವಾಗಿದ್ದು, ಪ್ರೇಕ್ಷಕರ ಮನ ಮಿಡಿಯುವಲ್ಲಿ ಯಶಸ್ವಿಯಾಗಿದೆ.











