


ಸೋಮವಾರಪೇಟೆ ಮಾ.3 NEWS DESK : ಕೃಷಿ ಕಾರ್ಮಿಕರು, ಪರಿಶಿಷ್ಟಜಾತಿ, ಪಂಗಡದ ನಿವೇಶನ ರಹಿತ ಬಡವರಿಗೆ ಸರ್ಕಾರ ಉಚಿತ ನಿವೇಶನ ನೀಡುವಂತೆ ಆಗ್ರಹಿಸಿ ಯುನೈಟೈಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ನ ಜಿಲ್ಲಾ ಸಮಿತಿ ಹರದೂರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿತು. ಯೂನಿಯನ್ನ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ ಅವರ ನೇತೃತ್ವದಲ್ಲಿ ಹರದೂರು ಬಾಣೆಯಿಂದ ಪಂಚಾಯಿತಿ ವರೆಗೆ ಮೆರವಣಿಗೆ ನಡೆಸಿ, ಹರದೂರು ಗ್ರಾಮ ಪಂಚಾಯಿತಿ ಮುಂಭಾಗ ಜಮಾಯಿಸಿದ ಸಮಿತಿಯ ಪ್ರಮುಖರು ಹಾಗೂ ನಿವೇಶನ ರಹಿತರು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ, ಕೊಡಗು ಜಿಲ್ಲೆಯಲ್ಲಿ ಪೈಸಾರಿ ಸೇರಿದಂತೆ ಇನ್ನಿತರ ಸರ್ಕಾರಿ ಭೂಮಿ ಬೇಕಾದಷ್ಟಿದೆ. ಕಳೆದ ಎರಡೂವರೆ ದಶಕಗಳಿಂದ ಮನೆಯಿಲ್ಲದ ಕಾರ್ಮಿಕರಿಗೆ ನಿವೇಶನ ನೀಡುವಂತೆ ನಿರಂತರ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಪೈಸಾರಿ ಜಾಗವನ್ನು ಬಲಾಡ್ಯರು ಕಬಳಿಸಿದ್ದಾರೆ. ಕೂಲಿ ಕಾರ್ಮಿಕರು ಅವರ ಮಕ್ಕಳು ಇವತ್ತಿಗೂ ಮುರುಕಲು ಗುಡಿಸಲಿನಲ್ಲಿ ಬದುಕುತ್ತಿದ್ದಾರೆ. ಲೈನ್ ಮನೆಯಲ್ಲೂ ಪ್ರಾಣಿಗಳಂತೆ ವಾಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕಳೆದ 25 ವರ್ಷಗಳಿಂದ ಕಾರ್ಮಿಕರಿಗೆ ನಿವೇಶನ ಸಿಕ್ಕಿಲ್ಲ. ಕಾಂಗ್ರೆಸ್ ಸರ್ಕಾರವಾದರೂ ಕಾರ್ಮಿಕರಿಗೆ, ಶೋಷಿತರಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು. ನಿವೇಶನ ನೀಡದಿದ್ದರೆ ಮುಂದಿನ ದಿನಗಳಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾರ್ಮಿಕ ವಿರೋಧಿ ರಾಜಕೀಯ ಪಕ್ಷಗಳಿಗೆ ತಕ್ಕಪಾಠ ಕಲಿಸಲಿದ್ದೇವೆ ಎಂದು ಎಚ್ಚರಿಸಿದರು. ಎಐಟಿಯುಸಿ ಪದಾಧಿಕಾರಿಗಳಾದ ಸೋಮನ್, ಮುತ್ತಪ್ಪ, ಲಲಿತ, ಬೇಬಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಿಡಿಒ ಪೂರ್ಣಿಮ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೋಜಮ್ಮ, ಸದಸ್ಯರಾದ ರಮೇಶ್ ಇದ್ದರು.