
ಮಡಿಕೇರಿ ಮಾ.10 NEWS DESK : ಕೊಡಗಿನ ಪ್ರವಾಸೋದ್ಯಮವನ್ನು ಪರಿಸರ ಸ್ನೇಹಿಯಾಗಿ ಮುನ್ನಡೆಸುವುದು ಮತ್ತು ಸ್ಥಳೀಯ ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿಸುವ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೂರ್ಗ್ ಹೊಟೇಲ್ಸ್ ಮತ್ತು ರೆಸಾರ್ಟ್ಸ್ ಅಸೋಸಿಯೇಷನ್ ಕಾರ್ಯಯೋಜನೆ ರೂಪಿಸಿದೆ ಎಂದು ಸಂಘಟನೆಯ ಅಧ್ಯಕ್ಷ ದಿನೇಶ್ ಕಾರ್ಯಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಸೋಸಿಯೇಷನ್ 1990ರಿಂದ ಕಾರ್ಯನಿರ್ವಹಿಸುತ್ತಿದ್ದು, ಪ್ರವಾಸೋದ್ಯಮವನ್ನು ಪರಿಸರ ಸ್ನೇಹಿಯಾಗಿ ಬೆಳೆಸಲು ಮುಂದಾಗಿದೆ. ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಗಳ ಸಹಕಾರದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಮಡಿಕೇರಿ ನಗರಸಭೆ ‘ಪ್ಲಾಸ್ಟಿಕ್ ಮುಕ್ತ ನಗರ’ ಚಿಂತನೆಯಡಿ ಯೋಜನೆಗಳನ್ನು ರೂಪಿಸುತ್ತಿದ್ದು, ಇದಕ್ಕೆ ಸಂಘಟನೆ ಸಹಕರಿಸಲಿದೆ. ಇಡೀ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವ ಹಾಗೂ ಪ್ಲಾಸ್ಟಿಕ್‍ಗೆ ಬದಲು ಪರ್ಯಾಯ ವ್ಯವಸ್ಥೆಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಸರ್ಕಾರ ಮತ್ತು ಪ್ರತಿಷ್ಠಿತ ಸಂಸ್ಥೆಗಳ ಸಹಕಾರದೊಂದಿಗೆ ‘ಪ್ರೈವೇಟ್ ಪಬ್ಲಿಕ್ ಪ್ರೋಗ್ರಾಂ’ನಡಿ ಜಿಲ್ಲೆಯ ಪ್ರವಾಸಿತಾಣಗಳನ್ನು ಅಭಿವೃದ್ಧಿಪಡಿಸುವ ಮತ್ತು ಹೊಸ ಪ್ರವಾಸಿ ಕೇಂದ್ರಗಳನ್ನು ಗುರುತಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು. ಅಸೋಸಿಯೇಷನ್ ನ ಕಾರ್ಯದರ್ಶಿ ನಾಸಿರ್ ಅಹಮ್ಮದ್ ಮಾತನಾಡಿ, ಉನ್ನತ ಸೇವಾ ಮಾನದಂಡದೊಂದಿಗೆ ಆತಿಥ್ಯ ಉದ್ಯಮ ನಡೆಸುವವರನ್ನು ಪ್ರೋತ್ಸಾಹಿಸುವುದು, ಜವಾಬ್ದಾರಿಯುತವಾಗಿ ಉದ್ಯಮ ಬೆಳೆಸುವುದು ನಮ್ಮ ಉದ್ದೇಶ. ಮುಂಬರುವ ದಿನಗಳಲ್ಲಿ ಉದ್ಯಮದ ಬಗ್ಗೆ ವಿಚಾರ ಸಂಕಿರಣ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
:: ಲೋಗೋ ಅನಾವರಣ :: ಈ ಹಿಂದೆ ಕೊಡಗು ಜಿಲ್ಲಾ ಹೊಟೇಲ್, ರೆಸ್ಟೋರೆಂಟ್ ಮತ್ತು ರೆಸಾಟ್ರ್ಸ್ ಅಸೋಸಿಯೇಷನ್ ಎಂದಿದ್ದ ಸಂಘಟನೆಯ ಹೆಸರನ್ನು ‘ಕೂರ್ಗ್ ಹೊಟೇಲ್ಸ್ ಮತ್ತು ರೆಸಾರ್ಟ್ಸ್ ಅಸೋಸಿಯೇಶನ್ ನಿಯಮಿತ’ ಎಂದು ಬದಲಾಯಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಪ್ರಮುಖರು, ಇದೇ ಸಂದರ್ಭ ಅಸೋಸಿಯೇಷನ್ ನ ಲೋಗೋವನ್ನು ಅನಾವರಣಗೊಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಮಂಜುನಾಥ್ ಬೇರೆರ, ಜಹೀರ್ ಅಹ್ಮದ್, ಖಜಾಂಚಿ ಸಾಗರ್ ಗಣಪತಿ ಅಪ್ಪಾರಂಡ, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸಲಹೆಗಾರ ನಾಗೇಂದ್ರ ಪ್ರಸಾದ್ ಉಪಸ್ಥಿತರಿದ್ದರು.









