


ಪುತ್ತೂರು ಮಾ.12 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಐಇಇಇ ವಿಸಿಇಟಿ ವಿದ್ಯಾರ್ಥಿ ವಿಭಾಗ, ಎಂಬಿಎ ವಿಭಾಗ ಮತ್ತು ಕಾಲೇಜು ಆಂತರಿಕ ದೂರು ಸಮಿತಿಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನವನ್ನು ಕಾಲೇಜಿನ ಸಾವರ್ಕರ್ ಸಭಾ ಭವನದಲ್ಲಿ ಆಚರಿಸಲಾಯಿತು. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಸುಷ್ಮಾ.ಜಿ.ಭಂಡಾರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಮಹಿಳೆಯರ ಸುರಕ್ಷತೆ ಮತ್ತು ಹಕ್ಕುಗಳ ಬಗ್ಗೆ ಬೆಳಕು ಚೆಲ್ಲಿದರು. ಪೋಕ್ಸೋ ಕಾಯ್ದೆ, ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವಲ್ಲಿ ಈ ಕಾಯ್ದೆಯ ಪಾತ್ರ, ಬಾಲ್ಯ ವಿವಾಹದ ಪರಿಣಾಮಗಳು, ವರದಕ್ಷಿಣೆ ಕಾಯಿದೆಯ ನಿಬಂಧನೆಗಳು, ಆನ್ಲೈನ್ ಕಿರುಕುಳಗಳು, ಸೈಬರ್ ಸುರಕ್ಷತೆಯ ಅರಿವು ಮತ್ತು ವೈಯಕ್ತಿಕ ಸುರಕ್ಷತೆಗಾಗಿ ಸಂಚಾರ ನಿಯಮಗಳನ್ನು ಪಾಲಿಸುವ ಅಗತ್ಯತೆಗಳು ಇವೇ ಮುಂತಾದ ಪರಿಣಾಮಕಾರಿ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ವಿದ್ಯಾ.ಆರ್.ಗೌರಿ, ಮಹಿಳಾ ಸಬಲೀಕರಣವು ಒಂದು ನಿರಂತರ ಪ್ರಕ್ರಿಯೆ ಎಂದರು. ಸ್ತ್ರೀಯರು ತಮ್ಮ ಆಂತರಿಕ ಶಕ್ತಿಯನ್ನು ಗುರುತಿಸಿಕೊಳ್ಳಬೇಕು, ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿರಬೇಕು, ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಯ ಬಗ್ಗೆ ಗಮನಹರಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಪಡೆದುಕೊಳ್ಳಬೇಕು ಎಂದರು. ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಐಇಇಇ ಅಧ್ಯಾಪಕ ಸಲಹೆಗಾರ್ತಿ ಪ್ರೊ.ರಜನಿ ರೈ ಮತ್ತು ಶಾಖಾ ಸಲಹೆಗಾರ್ತಿ ಡಾ.ಜೀವಿತ.ಬಿ,ಕೆ ಇದನ್ನು ನಡೆಸಿಕೊಟ್ಟರು. ಐಇಇಇ ಶಾಖಾ ಸಲಹೆಗಾರ್ತಿ ಡಾ. ಬಿ.ಕೆ.ಜೀವಿತ, ಕಾಲೇಜು ಆಂತರಿಕ ದೂರು ಸಮಿತಿಯ ಸಂಚಾಲಕಿ ಡಾ.ಎನ್.ಕೆ.ಸೌಮ್ಯ. ಎಂಬಿಎ ವಿಭಾಗದ ಕಾರ್ಯಕ್ರಮ ಸಂಯೋಜಕಿ ಪ್ರೊ.ರೇಶ್ಮಾ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಣಮ್ಯ ಮತ್ತು ಸುಮನಾ ಪ್ರಾರ್ಥಿಸಿದರು. ಐಇಇಇ ವಿಸಿಇಟಿ ವಿದ್ಯಾರ್ಥಿ ವಿಭಾಗ ಕೋಶಾಧಿಕಾರಿ ಅನೂಷಾ.ಎಸ್ ಸ್ವಾಗತಿಸಿದರು, ಕಾರ್ಯದರ್ಶಿ ಕೆ.ವಿ.ಧನಲಕ್ಷ್ಮಿ ವಂದಿಸಿದರು. ಉಪಾಧ್ಯಕ್ಷೆ ಬಿ.ಕ್ಷಿತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.