


ಕುಶಾಲನಗರ ಮಾ.13 NEWS DESK : ಮುಳ್ಳುಸೋಗೆಯಲ್ಲಿರುವ ಮೂರು ಗ್ರಾಮಗಳ ಗ್ರಾಮದೇವತೆ ದೊಡ್ಡಮ್ಮ ದೇವತಾ ಪ್ರತಿಷ್ಠಾಪನೆಯ 12ನೇ ವಾರ್ಷಿಕೋತ್ಸವದ ಅಂಗವಾಗಿ ಕುಂಭಾಭಿಷೇಕ ಹಾಗೂ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಶ್ರದ್ದಾಭಕ್ತಿಯಿಂದ ನೆರವೇರಿತು. ಎರಡು ದಿನಗಳ ಕಾಲ ನಡೆದ ದೇವತಾ ಪೂಜೋತ್ಸವದಲ್ಲಿ ಮುಂಜಾನೆ ಗಣಪತಿ ಹೋಮ, ನವಗ್ರಹ ಹೋಮ, ಕಳಸಾಭಿಷೇಕ, ಮಹಾಪೂಜೆ, ಸಂಜೆ ವಾಸ್ತು ಹೋಮ, ರಾಕ್ಷೋಘ್ನ ಹೋಮ, ದಿಗ್ಬಲಿ ನೆರವೇರಿತು. ಮರುದಿನ ಬೆಳಗ್ಗೆ ಕಾವೇರಿ ನದಿಯಿಂದ ಕಳಶ ತರಲಾಯಿತು. ಬಳಿಕ ಗಣಪತಿ ಹೋಮ, ದುರ್ಗಾ ಹೋಮ, ಪ್ರತಿಷ್ಠಾ ಕಳಸಾಭಿಷೇಕ, ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನೆರವೇರಿತು. ದೈವಜ್ಞ ಜಗದೀಶ್ ಉಡುಪ, ಸುಂಟಿಕೊಪ್ಪದ ಗಣೇಶ ಭಟ್, ಕೌಶಿಕ್ ಅವರಿಂದ ವಿವಿಧ ಹೋಮ ಹವನಾದಿಗಳು ನಡೆದವು. ದೇವಾಲಯ ಸಮಿತಿ ಅಧ್ಯಕ್ಷ ಎಂ.ಎ.ಕುಮಾರಸ್ವಾಮಿ, ಉಪಾಧ್ಯಕ್ಷ ಧನರಾಜ್, ಕಾರ್ಯದರ್ಶಿ ಎಂ.ಹೆಚ್.ಅಣ್ಣೇಗೌಡ, ಸಹಕಾರ್ಯದರ್ಶಿ ಎಂ.ಮಂಜುನಾಥ್, ಖಜಾಂಚಿ ಸೋಮು, ನಿರ್ದೇಶಕರಾದ ಎಂ.ಕೆ.ಗಣೇಶ್, ಎಂ.ಆರ್.ನಂಜುಂಡ, ಗೋವಿಂದರಾಜು, ಡಿ.ಅಪ್ಪಣ್ಣ, ಎಂ.ಸಿ.ಮಂಜುನಾಥ್, ಪುಟ್ಟರಾಜು, ಜಯರಾಜ್, ವಿಶ್ವನಾಥ್, ಗಣಪತಿ, ಸೋಮು, ಎಂ.ಸಂತೋಷ್ ಇದ್ದರು. ಮುಳ್ಳುಸೋಗೆ, ಗುಮ್ಮನಕೊಲ್ಲಿ ಹಾಗೂ ಜನತಾ ಕಾಲನಿ ಈ ಮೂರು ಗ್ರಾಮಗಳ ವ್ಯಾಪ್ತಿಯ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.