


ಮಡಿಕೇರಿ ಮಾ.13 NEWS DESK : ಕೊಡಗು ಕೇರಳ ಗಡಿಭಾಗದ ಕರಿಕೆ ಗ್ರಾ.ಪಂ ವ್ಯಾಪ್ತಿಯ ವಿವಿಧ ಕಾಲೋನಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಕುಟುಂಬಗಳು ಸೂಕ್ತ ಸೂರಿಲ್ಲದೆ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಕರಿಕೆ ಗ್ರಾ.ಪಂ ವ್ಯಾಪ್ತಿಯ ಕುಂಡಡ್ಕ ಕಾಲೋನಿಯಲ್ಲಿ ಪರಿಶಿಷ್ಟರು ಇಂದಿಗೂ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲುಗಳಲ್ಲೇ ಜೀವನ ಸಾಗಿಸುತ್ತಿದ್ದಾರೆ. ನಿವೇಶನವಿದ್ದರೂ ಮನೆ ನಿರ್ಮಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಬಡ ಕುಟುಂಬಗಳಿವೆ. ಇನ್ನೂ ಕೂಡ ನಿವೇಶನದ ಹಕ್ಕುಪತ್ರ ದೊರೆಯದೇ ಇರುವುದೇ ವಸತಿ ಭಾಗ್ಯದಿಂದ ಇವರುಗಳು ವಂಚಿತರಾಗಲು ಕಾರಣವಾಗಿದೆ. ಸ್ವಂತ ಸೂರು ಹೊಂದಬೇಕೆಂದು ಕನಸು ಕಾಣುತ್ತಿರುವ ಬಡಕುಟುಂಬಗಳಿಗೆ ನಿತ್ಯ ಕಚೇರಿಯಿಂದ ಕಚೇರಿಗೆ ಅಲೆಯುವ ಅನಿವಾರ್ಯತೆ ಎದುರಾಗಿದೆ. ಹಕ್ಕುಪತ್ರವಿಲ್ಲದೆ ಮನೆ ಮಂಜೂರು ಮಾಡಲು ಅಥವಾ ನಿರ್ಮಿಸಲು ಸಾಧ್ಯವಿಲ್ಲ ಎನ್ನುವ ಉತ್ತರ ಅಧಿಕಾರಿಗಳಿಂದ ಕೇಳಿ ಬರುತ್ತಿದೆ. ತಕ್ಷಣ ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಮನೆ ಮಂಜೂರು ಮಾಡಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
::: ತ್ವರಿತವಾಗಿ ಹಕ್ಕುಪತ್ರ ನೀಡಿ ::: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದಿದ್ದರೂ ಪರಿಶಿಷ್ಟರು ಪ್ಲಾಸ್ಟಿಕ್ ಹೊದಿಕೆಯ ಗುಡಿಸಲುಗಳಲ್ಲಿ ಜೀವನ ಸಾಗಿಸುವ ಸಂಕಷ್ಟದ ದಿನಗಳು ದೂರವಾಗಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಡಿಗ್ರಾಮವನ್ನು ನಿರ್ಲಕ್ಷಿಸಬಾರದು. ಕಂದಾಯ ಅಧಿಕಾರಿಗಳು ಕರಿಕೆ ಗ್ರಾ.ಪಂ ವ್ಯಾಪ್ತಿಯಲ್ಲಿರುವ ವಸತಿ ರಹಿತ ಬಡ ಕುಟುಂಬಗಳ ಮಾಹಿತಿ ಪಡೆದು ತ್ವರಿತವಾಗಿ ಹಕ್ಕುಪತ್ರಗಳನ್ನು ಮಂಜೂರು ಮಾಡಬೇಕು. ಪರಿಶಿಷ್ಟರ ಕಾಲೋನಿಗಳಿಗೆ ಶುದ್ಧ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. (ಶಿವಗಿರಿ ರಾಜೇಶ್, ಸಾಮಾಜಿಕ ಕಾರ್ಯಕರ್ತ, ಕರಿಕೆ)