


ಮಡಿಕೇರಿ NEWS DESK ಮಾ.16 : ತೋಟದ ಲೈನ್ ಮನೆಯೊಂದರಲ್ಲಿ ನವಜಾತ ಶಿಶು ಪತ್ತೆಯಾದ ಪ್ರಕರಣ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಲಮಾವಟ್ಟಿ ಪೇರೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಶನಿವಾರ ರಾತ್ರಿ ಹೆಣ್ಣು ಶಿಶು ಪತ್ತೆಯಾಗಿದ್ದು, ಕೇವಲ ಒಂದೆರಡು ಗಂಟೆಗಳ ಹಿಂದೆ ಇದು ಜನಿಸಿದೆ ಎಂದು ಹೇಳಲಾಗಿದೆ. ಯಾರೂ ವಾಸವಿಲ್ಲದ ಲೈನ್ ಮನೆಯಲ್ಲಿ ಬಟ್ಟೆಯಲ್ಲಿ ಸುತ್ತಿದ್ದ ಶಿಶುವನ್ನು ಇರುವೆಗಳು ಸುತ್ತುವರೆದಿದ್ದವು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದರು. ನಂತರ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿದರು. ನಾಪೋಕ್ಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶಿಶುವಿನ ವಾರಸುದಾರರ ಬಗ್ಗೆ ಮಾಹಿತಿ ಲಭಿಸಿದಲ್ಲಿ ನಾಪೋಕ್ಲು ಪೊಲೀಸ್ ಠಾಣೆಗೆ (9480804948) ಮಾಹಿತಿ ನೀಡುವಂತೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.