


ಕುಶಾಲನಗರ ಮಾ.17 NEWS DESK : ಕುಶಾಲನಗರದ ಲಯನ್ಸ್ ಕ್ಲಬ್ ಮತ್ತು ಗೌಡ ಸಮಾಜದ ವತಿಯಿಂದ ಕರ್ನಾಟಕ ರತ್ನ, ಯೂತ್ ಐಕಾನ್ ಡಾ।। ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮಾ.17 ರಕ್ತದಾನ ಶಿಬಿರ, ಮಧುಮೇಹ, ರಕ್ತದೊತ್ತಡ ತಪಾಸಣೆ ಮತ್ತು ಜಾಗೃತಿ ಶಿಬಿರ ಕುಶಾಲನಗರದ ಗೌಡ ಸಮಾಜ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರವೀಣ್ ದೇವರಗುಂಡ ಸೋಮಪ್ಪ ತಿಳಿಸಿದರು. ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಕೋರಿದರು. ಲಯನ್ಸ್ ವಲಯ ರಾಯಭಾರಿ ಕೊಡಗನ ಹರ್ಷ ಮಾತನಾಡಿ, ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಎಂಬುದು ಇಲ್ಲ. ರಕ್ತಕ್ಕೆ ನಿರಂತರ ಬೇಡಿಕೆಯಿದೆ. ದಾನಿಗಳಿಂದ ಒಮ್ಮೆ ಸಂಗ್ರಹಿಸಿದ ರಕ್ತ 35 ದಿನಗಳವರೆಗೆ ಮಾತ್ರ ತನ್ನ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ. ಆರೋಗ್ಯವಂತರು ಕಾಲಕಾಲಕ್ಕೆ ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆ ನೀಗಿಸಲು ಮುಂದಾಗಬೇಕಿದೆ. ಸೋಮವಾರ ಬೆಳಗ್ಗೆ 10 ರಿಂದ 3 ಗಂಟೆವರೆಗೆ ನಡೆಯಲಿರುವ ಶಿಬಿರದಲ್ಲಿ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕದಾನ ಮಾಡಲು ಅವರು ಕೋರಿದರು. ಲಯನ್ಸ್ ವಲಯ ಅಧ್ಯಕ್ಷ ಸುಮನ್ ಬಾಲಚಂದ್ರ ಮಾತನಾಡಿ, ಪುನಿತ್ ರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ 2022 ರಿಂದ ಪ್ರತಿ ವರ್ಷ ಶಿಬಿರ ಏರ್ಪಡಿಸಲಾಗುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅತಿಮುಖ್ಯ ಎಂದರು. ಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ನಿತಿನ್ ಗುಪ್ತ, ಖಜಾಂಚಿ ಎಂ.ಜಿ.ಕಿರಣ್, ಗೌಡ ಸಮಾಜ ಸಹ ಕಾರ್ಯದರ್ಶಿ ಡಾಟಿ ಶಾಂತಕುಮಾರಿ ಇದ್ದರು.