



ಸೋಮವಾರಪೇಟೆ ಮಾ.18 NEWS DESK : ಜಾತ್ರೆ, ಉತ್ಸವಗಳು ನಮ್ಮ ಸಂಸ್ಕೃತಿಯ ಪ್ರತೀಕವೆಂದು ಮನೆ ಹಳ್ಳಿ ಮಠಾದೀಶ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಹೇಳಿದರು. ತಪೋಕ್ಷೇತ್ರ ಮನೆಹಳ್ಳಿ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಕ್ಷೇತ್ರದ 13ನೆ ವರ್ಷದ ಜಾತ್ರೆ ಹಾಗೂ ರಥೋತ್ಸವದ ಕಾರ್ಯಗಳು ಮತ್ತು ಪತ್ರಿಕೆ ಬಿಡುಗಡೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಆಧುನಿಕತೆ ಬೆಳೆದಂತೆ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳು ಬದಲಾಗುತ್ತಿರುವುದು ವಿಷಾದನೀಯ ಎಂದರು. ಜಾತ್ರೆ, ಉತ್ಸವಗಳು ನಡೆಯುವುದರಿಂದ, ಅದರಲ್ಲಿ ಭಾಗವಹಿಸುವುದರಿಂದ ಸಂಬಂಧಗಳು ವೃದ್ಧಿಯಾಗುತ್ತದೆ ಎಂದ ಅವರು ಇದರಿಂದ ಶಾಂತಿ, ಸಹಬಾಳ್ವೆ ನಡೆಸಲು ಸಹಕಾರಿ ಯಾಗುತ್ತದೆ ಎಂದರು. ಏ.12, 13 ಹಾಗೂ 14 ರಂದು ಕ್ಷೇತ್ರದ 13ನೆ ವರ್ಷದ ಜಾತ್ರೆ, ರಥೋತ್ಸವ ನಡೆಯಲಿದ್ದು, ಎಲ್ಲಾ ಭಕ್ತಾದಿಗಳು ಪಾಲ್ಗೊಳ್ಳಬೇಕೆಂದರು. ಈ ಸಂದರ್ಭ ಕೆ.ಆರ್.ಐ.ಡಿ.ಎಲ್ ನ ಕೊಡಗು ಜಿಲ್ಲಾ ಸಹಾಯಕ ಕಾರ್ಯಪಾಲ ಅಭಿಯಂತರ ಪ್ರಮೋದ್ ಪತ್ರಿಕೆ ಬಿಡುಗಡೆ ಮಾಡಿದರು. ತೊರೆನೂರು ಮಠದ ಶ್ರೀ.ಮಲ್ಲೇಶ ಸ್ವಾಮೀಜಿ,ಶಿಡಿಗಳಲೇ ಮಠದ ಶ್ರೀ.ಇಮ್ಮಡಿ ಶಿವಲಿಂಗ ಸ್ವಾಮೀಜಿ,ವಿರಾಜಪೇಟೆ ವೀರಶೈವ ಸಮಾಜದ ಅಧ್ಯಕ್ಷ ರಾಜೇಶ್ ,ಪ್ರಮುಖರುಗಳಾದ ಪ್ರಕಾಶ್,ಪಾಲಾಕ್ಷ, ನಾರಾಯಣ ಸ್ವಾಮಿ,ಮಂಜುನಾಥ್,ಹಾಗು ಮುಂತಾದವರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.