


ಮಡಿಕೇರಿ ಮಾ.22 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಸುಂಟಿಕೊಪ್ಪ ಕೊಡವ ಸಮಾಜದ ಸಂಯುಕ್ತಾಶ್ರಯದಲ್ಲಿ ಸುಂಟಿಕೊಪ್ಪ ನಾಡ್ ಕೊಡವ ನಮ್ಮೆ ಸಂಭ್ರಮದಿಂದ ನಡೆಯಿತು. ಸುಂಟಿಕೊಪ್ಪ ಅಯ್ಯಪ್ಪ ದೇವಾಲಯದಿಂದ ಮುಖ್ಯ ಪಟ್ಟಣದ ಮೂಲಕ ಕೊಡವ ಸಮಾಜದವರೆಗೆ ಕೊಡವ ಆಚಾರ, ವಿಚಾರ, ಸಂಸ್ಕೃತಿಯನ್ನು ಬಿಂಬಿಸುವ ಕೊಡವ ಸಾಂಪ್ರದಾಯಿಕ ದುಡಿಕೊಟ್ಟ್, ಕೊಂಬ್-ಆಟ್, ವಾಲಗದೊಂದಿಗೆ ಕೊಡವ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಡವ ಜನಾಂಗದ ಮೂಲ ಸಾಂಪ್ರದಾಯಿಕ ಆಚಾರ, ವಿಚಾರ, ಸಂಸ್ಕೃತಿ, ಭಾಷೆ, ಉಡುಪು ತೊಡುಪನ್ನು ಉಳಿಸಿಕೊಂಡಾಗ ಮಾತ್ರ ಕೊಡವ ಜನಾಂಗ ಉಳಿಯಲು ಸಾಧ್ಯ. ಹಿರಿಯರು ಕಟ್ಟಿಕೊಟ್ಟ ಐನ್ ಮನೆ, ಕೈಮಾಡ, ಅರೋಡ, ಮಂದ್ ಮಾನಿ ಕೊಡವರ ಮೂಲನೆಲೆಯಾಗಿಯೇ ಉಳಿಯಬೇಕೆಂದರು. ಕೊಡವರ ಒಗ್ಗಟ್ಟಿನ ಪ್ರದರ್ಶನದ ಮೂಲಕ ಸಂಸ್ಕೃತಿಯ ಪ್ರದರ್ಶನದ ವೇದಿಕೆಯೇ ಈ ಕೊಡವ ನಮ್ಮೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವಿವಿಧೆಡೆ ಹಲವು ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಪ್ರತಿ ಕೊಡವ ಸಮಾಜಗಳು ಕೊಡವ ಭಾಷೆ, ಸಂಸ್ಕ್ರತಿ, ಆಚಾರ, ವಿಚಾರವನ್ನು ಉಳಿಸಿ ಬೆಳೆಸುವ ವೇದಿಕೆಯಾಗಿದೆ ಎಂದರು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಮಾತನಾಡಿ, ಕೊಡವ ಸಂಸ್ಕ್ರತಿ, ಆಚಾರ, ವಿಚಾರವನ್ನು ಉಳಿಸಿ ಬೆಳೆಸುವ ಜೊತೆಗೆ ಮುಂದಿನ ಯುವ ಪೀಳಿಗೆ ಮಾರ್ಗದರ್ಶನವನ್ನು ನೀಡುವಂತಾಗ ಬೇಕೆಂದರು. ಕೊಡವ ಸಾಹಿತ್ಯ ಅಕಾಡೆಮಿಯ ಕಾರ್ಯವನ್ನು ಶ್ಲಾಘಿಸಿದರು. ಹಾಕಿ ಆಟಗಾರ ಹಾಗೂ ಕ್ರೀಡಾ ವೀಕ್ಷಕ ವಿವರಣೆಗಾರರಾದ ಚೆಪ್ಪುಡಿರ ಎ.ಕಾರ್ಯಪ್ಪ ಮಾತನಾಡಿ, ಹಿರಿಯ ಹಾಕಿ ಆಟಗಾರ ಪದ್ಮಶ್ರೀ ಪ್ರಶಸ್ತಿ ವಿಜೇತ ಮೊಳ್ಳರ ಪಿ.ಗಣೇಶ್ ಅವರನ್ನು ದೇಶಕ್ಕಾಗಿ ನೀಡಿದ ಕೀರ್ತಿ ಸುಂಟಿಕೊಪ್ಪದ ಅಂದ ಗೋವೆಗೆ ಸಲ್ಲಬೇಕೆಂದರು. ಇವರು ಈಗಿನ ಯುವ ಪೀಳಿಗೆಗೆ ಮಾದರಿಯಾಗಲಿದ್ದಾರೆಂದರು. ಕಾಫಿಮಂಡಳಿಯ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ ಮಾತನಾಡಿ, ಯುವಪೀಳಿಗೆಯವರು ಉಳಿತಾಯದ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದರು. ಸಾಂಪ್ರದಾಯಿಕವಾಗಿ ಬಂದಂತ ಈ ಪುಣ್ಯ ಭೂಮಿಯನ್ನು ಮಾರಾಟಮಾಡ ಬಾರದೆಂದರು. ಕಾರ್ಯಕ್ರಮದ ಅಂಗವಾಗಿ ಸುಂಟಿಕೊಪ್ಪ ಕೊಡವ ಸಮಾಜ ಮಹಿಳೆಯರಿಂದ ಸ್ವಾಗತ ನೃತ್ಯ ನೆರವೇರಿತು.
:: ಸನ್ಮಾನ :: ಹಿರಿಯ ಕೊಡವಾಭಿಮಾನಿ ಪುಡಿಯಂಡ ಕೆ.ಮುತ್ತಣ್ಣ, ಹಿರಿಯ ಜಾನಪದ ಕಲಾವಿದ ಚಿಕ್ಕಂಡ ಉತ್ತಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಮುಕ್ಕಾಟೀರ ಎ.ವಸಂತ, ಹಿರಿಯ ಕೊಡವಾಭಿಮಾನಿ ಚೇನಂಡ ಎ.ಉತ್ತಯ್ಯ, ಹಿರಿಯ ಹಾಕಿ ಆಟಗಾರರಾದ ಮಾಳೆಯಂಡ ಡಿ.ಮುತ್ತಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ರಿಜಿಸ್ಟ್ರರ್ ಅಜ್ಜಿಕುಟ್ಟೀರ ಸಿ.ಗಿರೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊಡವ ಬಾಳ್- ಬದ್ ಕ್, ಅಂದ್ – ಇಂದ್ ಎಂಬ ವಿಷಯದ ಕುರಿತು ಅಪ್ಪಚಟ್ಟೋಳಂಡ ಸೋಮಯ್ಯ ಹಾಗೂ ಕೊಡವಾಮೆನ ಪೋತುವಲ್ಲಿ ಪೊಮ್ಮಕ್ಕಡ ಜವಾಬ್ದಾರಿ ವಿಷಯದ ಕುರಿತು ಅಜ್ಜಿಕುಟ್ಟಿ ಸುನಿತ ಗಿರೀಶ್ ವಿಚಾರ ಮಂಡಿಸಿದರು. ಕೊಡವ ಕವಿಗೋಷ್ಟಿಯಲ್ಲಿ ಉಡುವೆರ ವಿಠಲ್ ತಿಮ್ಮಯ್ಯ, ಅಣ್ಣಳಮಡ ಕಾಂತಿ ಚೋಂದಮ್ಮ, ಉಡುವೆರ ರೇಖ ರಘು, ಚೆಪ್ಪುಡಿರ ಸರ್ ಸತೀಶ್, ಅಂಜಪರವಂಡ ರಂಜನ್ ಮುತ್ತಪ್ಪ ಕವನ ವಾಚಿಸಿದರು. ಕಾರ್ಯಕ್ರಮದ ಅಂಗವಾಗಿ ಬೆಕ್ಕೆಸುಡ್ಲೂರ್ ಮಂದತವ್ವ ಕೊಡವ ಸಾಂಸ್ಕೃತಿಕ ತಂಡದಿಂದ ವಿವಿಧ ನೃತ್ಯ, ಉಮ್ಮತಾಟ್, ಮುಕೋಡ್ಲು ವ್ಯಾಲಿಡ್ಯೂ ತಂಡದಿಂದ ಪೀಲಿಯಾಟ್ ಬೊಳಕಾಟ್, ಕೊಡಗರಳ್ಳಿ ತಂಡದಿಂದ ಬಾಳೋಪಾಟ್, ವಾಲಗತಾಟ್ ಪ್ರದರ್ಶನ ನೆರವೇರಿತು. ನಂತರ ವಿವಿಧ ಸಾಂಸ್ಕೃತಿಕ ಸ್ಪರ್ಧೆ ನೆರವೇರಿತು. ಮುಕ್ಕಾಟಿರ ಪಾರ್ವತಿ ವಸಂತ ಪಾರ್ಥಿಸಿದರು, ಅಜ್ಜಿಕುಟ್ಟೀರ ಗಿರೀಶ್, ಅಜ್ಜಿಕುಟ್ಟೀರ ಸುನಿತ ಗಿರೀಶ್, ಮುಕ್ಕಾಟಿರ ವಸಂತ ನಿರೂಪಿಸಿದರು. ಅಜ್ಜಿಕುಟ್ಟೀರ ಗಿರೀಶ್ ವಂದಿಸಿದರು. ಸಂತಾಪ: ಸುಮಾರು 55 ವರ್ಷಗಳ ಸುದೀರ್ಘ ಕನ್ನಡ ಚಲನ ಚಿತ್ರರಂಗದ ಸೇವೆ, ಬರಹಗಾರನಾಗಿ, ಸಹನಿರ್ದೇಶಕನಾಗಿ, ಮುಖ್ಯಸಹ ನಿರ್ದೇಶಕನಾಗಿ, ನಿರ್ದೇಶಕನಾಗಿ, ನಿರ್ಮಾಪಕ ಹಾಗೂ ನಟನಾಗಿದ್ದ ಅಪಾಡಂಡ ಟಿ.ರಘು ಅವರ ನಿಧನಕ್ಕೆ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಲಾಯಿತು.
ವರದಿ: ಪುತ್ತರಿರ ಕರುಣ್ ಕಾಳಯ್ಯ