


ಮಡಿಕೇರಿ ಮಾ.22 NEWS DESK : ದೇಹ ಮತ್ತು ಮನಸ್ಸಿನ ನಿಯಂತ್ರಣವೇ ಯಶಸ್ಸಿನ ಕೀಲಿ ಕೈ ಎಂದು ತರಬೇತುದಾರ, ವ್ಯಕ್ತಿತ್ವ ವಿಕಸನದ ಮಾರ್ಗದರ್ಶಕ ಎಂ.ಆರ್.ಸೋಮಣ್ಣ ಹೇಳಿದರು. ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕುರಿತು ಒಂದು ದಿನದ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಮನಸ್ಸು ಮತ್ತು ದೇಹವನ್ನು ನಿಯಂತ್ರಿಸಲು ಪ್ರಾಣಾಯಾಮ, ಯೋಗಾಸನ ಹಾಗೂ ಕ್ರೀಡೆಗಳ ಮಹತ್ವ ತಿಳಿಸಿದರು. ಪ್ರತಿ ಗಂಟೆಗೆ ಒಮ್ಮೆ ನೀರನ್ನು ಕುಡಿಯಿರಿ, ಮನಸ್ಸನ್ನು ನಿರಂತರವಾಗಿ ಒತ್ತಡಕ್ಕೆ ಒಳಪಡಿಸುವುದರಿಂದ ಪರಿಣಾಮಕಾರಿಯಾಗಿ ಯೋಚಿಸಲು ಆಗುವುದಿಲ್ಲ ಎಂದರು. ಊಟ ಮತ್ತು ನಿದ್ರೆ ಎರಡು ಮೂಲಭೂತ ಅವಶ್ಯಕತೆಗಳಾಗಿದ್ದು, ಮೂರು ಬಾರಿ ಊಟ, ಏಳು ಗಂಟೆಗಳ ನೆಮ್ಮದಿಯ ನಿದ್ರೆಯು ಆರೋಗ್ಯವಂತರ ಲಕ್ಷಣ ಎಂದು ತಿಳಿಸಿದರು. ಮಕ್ಕಳ ಮನೋತಜ್ಞೆ ಡಾ.ಮನ ಮಾತನಾಡಿ, ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯದ ನಡುವೆ ಸಂಬಂಧವಿದೆ. ನಮ್ಮ ಆಲೋಚನೆಗಳು, ಭಾವನೆಗಳು, ನಂಬಿಕೆಗಳು ದೇಹದಲ್ಲಿ ಹಾರ್ಮೋನುಗಳ ಪ್ರತಿಕ್ರಿಯೆಗಳನ್ನು ಪ್ರಚೋದಿಸಬಹುದು ಇದು ರೋಗನಿರೋಧಕ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮೊಬೈಲ್ ವೀಕ್ಷಣೆ ಕಡಿಮೆ ಮಾಡಿರಿ, ಓದಿನ ಕಡೆ ಗಮನಹರಿಸಿ ಎಂದರು. ಕಾಲೇಜಿನ ಕಛೇರಿ ಅಧಿಕ್ಷಕ ಉತ್ತಪ್ಪ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಮಯ ಪಾಲನೆ, ನಿರಂತರ ಅಧ್ಯಯನ ರೂಢಿಸಿಕೊಳ್ಳಿರಿ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ.ದಯಾನಂದ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಸವರಾಜು. ಕೆ IQAC ಸಂಚಾಲಕರಾದ ಎಂ.ಆರ್.ಚರಿತ , ಮಹಿಳಾ ಸಮಿತಿಯ ಸಂಚಾಲಕಿ ದಮಯಂತಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ನಿಶಾನ್ ಜೋಸೆಫ್ ಸ್ವಾಗತಿಸಿದರೆ, ಸಾದಿಯಾ ವಂದಿಸಿದರು. ಕೀರ್ತನ ಪ್ರಾರ್ಥಿಸಿದರು. ಹರೀಶ್ ನಿರೂಪಿಸಿದರು.