


ಮಡಿಕೇರಿ ಮಾ.22 NEWS DESK : ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಿರ್ದೇಶಕರಲ್ಲಿ ಒಬ್ಬರಾದ ಎ.ಟಿ.ರಘು ಎಂದೇ ಖ್ಯಾತರಾಗಿದ್ದ ಆಪಾಡಂಡ ರಘು ನಿಧನಕ್ಕೆ ಕೊಡವಾಮೆರ ಕೊಂಡಾಟ ಸಂಘಟನೆ ಸಂತಾಪ ವ್ಯಕ್ತಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ, ಕನ್ನಡ ಚಿತ್ರರಂಗದ ದೈತ್ಯ ನಾಯಕ ಅಂಬರೀಶ್ ಅವರಿಗೆ ಸುಮಾರು 27 ಚಿತ್ರಗಳನ್ನು ನಿರ್ದೇಶಿಸಿದ್ದ, ಒಟ್ಟು ಸುಮಾರು 55 ಚಿತ್ರಗಳ ನಿರ್ದೇಶನ ಮಾಡಿ, ಹಲವು ಚಿತ್ರಗಳಲ್ಲಿ ನಟಿಸಿದ್ದೂ ಅಲ್ಲದೆ, ಸ್ವತಃ ತಾವೇ ನಿರ್ಮಾಣವನ್ನೂ ಮಾಡಿ ಸೈ ಎನಿಸಿಕೊಂಡಿದ್ದ, ಪ್ರತಿಷ್ಠಿತ ಪುಟ್ಟಣ ಕಣಗಾಲ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಬಿರುದುಗಳಿಗೆ ಭಾಜನರಾಗಿದ್ದ, ಎ.ಟಿ.ರಘು ಅವರು ನಿಧನರಾಗಿದ್ದು, ನಾಡಿಗೆ ಮತ್ತು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಕೊಡವ ಜನಾಂಗದ ಅನರ್ಘ್ಯ ರತ್ನವೊಂದು ಇಂದು ಕಳಚಿದಂತಾಗಿದ್ದು, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬಕ್ಕೆ ನೀಡಲಿ ಎಂದು ಆಶಿಸಿದ್ದಾರೆ.