


ಮಡಿಕೇರಿ ಮಾ.22 NEWS DESK : ಪೊನ್ನಂಪೇಟೆ ತಾಲ್ಲೂಕಿನ ಐತಿಹಾಸಿಕ ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ದೇವಾಲಯದಲ್ಲಿ ಹನ್ನೆರಡು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ಮಾ.8 ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ, ಊರಿನವರು ಮತ್ತು ಊರಿನ ಮಹಿಳೆಯರಿಂದ 12 ತಳಿಯತಕ್ಕಿ, ಬೊಳ್‍ಚ್ಚ, ದುಡಿಕೊಟ್ಟ್ ಪಾಟ್‍ನೊಂದಿಗೆ ಹಬ್ಬಕ್ಕೆ ಚಾಲನೆ ದೊರೆಯಿತು. ನಂತರ ಹನ್ನೊಂದು ದಿನಗಳ ಕಾಲ ನಿತ್ಯಪೂಜೆ, ಶತರುದ್ರಾಭಿಷೇಕ, ಶುದ್ಧ ಕಲಶ, ಉತ್ಸವ ಮೂರ್ತಿ ದರ್ಶನ, ನಿತ್ಯಪೂಜೆ, ತೂಚಂಬಲಿ ಭಂಡಾರ ಬರುವುದು, ಇರುಬಳಕು, ತುಲಭಾರ ಸೇವೆ ನೆರವೇರಿತು. “ಶ್ರೀ ವಿಷ್ಣು ದೇವರ ಅಲಂಕಾರ ಪೂಜೆ”, ಶಾಸ್ತ್ರೋಕ್ತವಾಗಿ 12 ತೆಂಗಿನಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ, ಉತ್ಸವ ಮೂರ್ತಿ ದರ್ಶನ, ಅವಭೃತ ಸ್ನಾನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿತು. ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ಊರಿನ ಪ್ರತಿ ಕುಟುಂಬದ ಮಹಿಳೆಯರು ಸಾಂಪ್ರದಾಯಿಕ ಉಡುಪಿನೊಂದಿಗೆ ತಳಿಯತಕ್ಕಿ ಬೊಳಕ್‍ನೊಂದಿಗೆ ಉತ್ಸವ ಮೂರ್ತಿಗೆ ಸ್ವಾಗತ ಕೋರಿದರು. ಬಳಿಕ ಉತ್ಸವ ಮೂರ್ತಿಯ ನೃತ್ಯ, ವಸಂತ ಪೂಜಾ ಕೈಂಕರ್ಯ ನಡೆಯಿತು. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪಾಟಾಕಿ-ಸಿಡಿಮದ್ದುಗಳ ಪ್ರದರ್ಶನ ಗಮನ ಸೆಳೆಯಿತು. ದೇವರು ಅವಭ್ರತ ಸ್ನಾನಕ್ಕೆ ತೆರಳಿ ಹಿಂತಿರುಗುವ ತನಕ ಗೊಂಬೆಯಾಟ, ಚೆಕ್ಕೆರ ಪಂಚಮ್ ಅವರ ಹಾಡುಗಾರಿಕೆ, ಪೂಳೆಮಾಡು ಈಶ್ವರ ತಂಡ ಬೇಗೂರು ಇವರ ಬೊಳಕಾಟ್, ಕತ್ತಿಯಾಟ್, ಪೊರಾಡು ಬಾಲಕರಿಂದ ತಾಳಿಪಾಟ್‍ನಂತಹ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಸ್ಥಳೀಯ ಗ್ರಾಮಗಳ ಜನರೊಂದಿಗೆ, ಸುತ್ತಮುತ್ತ ಗ್ರಾಮಗಳ ಜನರೂ ಉತ್ಸವದಲ್ಲಿ ಪಾಲ್ಗೊಂಡಿದ್ದರು. ದೇವತಕ್ಕ ಅಣ್ಣೀರ ಕುಟುಂಬದ ದಾದ ಗಣಪತಿ, ನಾಡ್ ತಕ್ಕ ಕಾಯಪಂಡ ಕುಟುಂಬದ ಅಯ್ಯಪ್ಪ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚೋನಿರ ಸುಬ್ರಮಣಿ, ಉಪಾಧ್ಯಕ್ಷ ಕಾಯಪಂಡ ಸ್ಟಾಲಿನ್ ಗಣಪತಿ, ಕಾರ್ಯದರ್ಶಿ ಬಲ್ಯಮಿದೇರಿರ ಸಂಪತ್, ಖಜಾಂಚಿ ಬಲ್ಯಮೀದೇರಿರ ಚೇತನ್ ಸೋಮಣ್ಣ, ಸದಸ್ಯರಾದ ಮೀದೇರಿರ ಜೈ ಗಣಪತಿ, ಕಾಯಪಂಡ ಕಾವೇರಪ್ಪ, ಅಣ್ಣೀರ ಲೋಕೇಶ್, ಮಲ್ಲೇಂಗಡ ಗಣಪತಿ, ಅಣ್ಣೀರ ಸರು ಮಂಜುನಾಥ್, ಕಾಯಪಂಡ ಸುರೇಂದ್ರ, ಅಮ್ಮತ್ತೀರ ಪರಮೇಶ್ವರ, ಬಲ್ಯಮೀದೇರಿರ ರನ್ನು, ಕಾಯಪಂಡ ಸುನಿಲ್, ಪ್ರಧಾನ ಅರ್ಚಕ ಗಿರೀಶ್ ಅವರ ನೇತೃತ್ವದಲಲಿ ಉತ್ಸವ ನಡೆಯಿತು.