


ಕುಶಾಲನಗರ ಮಾ.22 NEWS DESK : ಕೊಡಗು ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ ಅಭಿಯಾನ ಯೋಜನೆಯ ಜಲ ಜೀವನ್ ಮಿಷನ್ ,
ಶಾಲಾ ಶಿಕ್ಷಣ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ರಾಷ್ಟ್ರೀಯ ಹಸಿರು ಪಡೆ ( ಎನ್.ಜಿ.ಸಿ.),ಇಕೋ ಕ್ಲಬ್ , ಕೂಡುಮಂಗಳೂರು ಗ್ರಾಮ ಪಂಚಾಯತಿ, ಹಾಸನದ ಸೀಕೋ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ( ಮಾ.22 ರಂದು ) ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್.), ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಘಟಕ, ಎಸ್.ಡಿ.ಎಂ.ಸಿ. ಹಾಗೂ ಇಕೋ ಕ್ಲಬ್ ನ ವತಿಯಿಂದ ಕೂಡ್ಲೂರು ಗ್ರಾಮದಲ್ಲಿ ವಿಶ್ವ ಜಲ ದಿನವನ್ನು ಆಚರಿಸಲಾಯಿತು. ಶಾಲಾ ಪ್ರಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿಶ್ವ ಜಲ ದಿನದ ಮಹತ್ವ ಹಾಗೂ ನೀರಿನ ಸಂರಕ್ಷಣೆ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಅತ್ಯಮೂಲ್ಯ ಸಂಪತ್ತಾದ ನೀರನ್ನು ನಾವು ಪೋಲು ಮಾಡದೇ ಮಿತವಾಗಿ ಬಳಕೆ ಮಾಡುವ ಮೂಲಕ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಉಳಿಸಿ ಸಂರಕ್ಷಿಸಲು ಪಣ ತೊಡಬೇಕು ಎಂದರು. ನೀರಿನ ಅಭಾವವನ್ನು ತಡೆಗಟ್ಟಲು ಇರುವ ಒಂದೇ ಮಾರ್ಗವೆಂದರೆ ನೀರಿನ ಸಂರಕ್ಷಣೆ.ಲಭ್ಯವಿರುವ ನೀರನ್ನು ಜಾಗರೂಕತೆಯಿಂದ ಮತ್ತು ಮಿತವ್ಯಯದಿಂದ ಬಳಸಿ,ಮುಂದಿನ ಪೀಳಿಗೆಗೆ ನೀರನ್ನು ಉಳಿಸುವುದೇ ನೀರಿನ ಸಂರಕ್ಷಣೆ ಎಂದರು. ಅಮೂಲ್ಯವಾಗಿ ರುವ ನೀರನ್ನು ಸಂರಕ್ಷಿಸುವ ದೃಷ್ಟಿ ಯಿಂದ ಜಲಮೂಲಗಳನ್ನು ಸಂರಕ್ಷಿಸು ವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರೇಮಕುಮಾರ್ ಹೇಳಿದರು. ನೀರಿನ ಸಂರಕ್ಷಣೆಯ ಮಹತ್ವ ಕುರಿತು ಮಾಹಿತಿ ನೀಡಿದ ಜಿಲ್ಲಾ ಜಲ ಜೀವನ್ ಮಿಷಿನ್ ನ ಜಿಲ್ಲಾ ಯೋಜನಾ ವ್ಯವಸ್ಥಾಪಕ ಕೆ.ಪುಟ್ಟಸ್ವಾಮಿ ಮಾತನಾಡಿ, ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳುಸುವುದರ ಮೂಲಕ ಜಲ ಸಂರಕ್ಷಣೆ ಮಾಡುವ ಅಗತ್ಯವಿದೆ. ಮಳೆನೀರು ಕೊಯ್ಲು ಮತ್ತು ಅಂತರ್ಜಲ ಸಂರಕ್ಷಣೆ ಬಗ್ಗೆ ನಾವು ಹೆಚ್ಚಿನ ಆದ್ಯತೆ ನೀಡುವ ಮೂಲಕ ನಾಳಿನ ಉತ್ತಮ ಭವಿಷ್ಯಕ್ಕಾಗಿ
ನೀರಿನ ಸಂರಕ್ಷಣೆಗೆ ಪಣ ತೊಡಬೇಕಿದೆ ಎಂದರು. ಜಲ ಜೀವನ್ ಮಿಷನ್ ಘಟಕದ ಜಿಲ್ಲಾ ಸಮನ್ವಯಾಧಿಕಾರಿ ಜಗ್ಗೇಶ್, ನೀರಿನ ಸದ್ಬಳಕೆ ಕುರಿತು ಮಾತನಾಡಿ,ಮಳೆನೀರು ಕೊಯ್ಲು ಮತ್ತು ಅಂತರ್ಜಲ ಸಂರಕ್ಷಣೆ ಬಗ್ಗೆ ನಾವು ಹೆಚ್ಚಿನ ಆದ್ಯತೆ ನೀಡುವ ಮೂಲಕ ನಾಳಿನ ಉತ್ತಮ ಭವಿಷ್ಯಕ್ಕಾಗಿ ನೀರಿನ ಸಂರಕ್ಷಣೆಗೆ ಪಣ ತೊಡಬೇಕಿದೆ ಎಂದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್, ನೀರಿನ ಸಂರಕ್ಷಣೆ ಕುರಿತ ಪೋಸ್ಟರ್ ಬಿಡುಗಡೆಗೊಳಿಸಿದರು. ಶಾಲೆಯ ಎನ್.ಎಸ್.ಎಸ್.ಕಾರ್ಯಕ್ರಮ ಅಧಿಕಾರಿ ಕೆ.ಟಿ.ಸೌಮ್ಯ, ವಿದ್ಯಾರ್ಥಿಗಳಿಗೆ ನೀರಿನ ಸಂರಕ್ಷಣೆ ಕುರಿತ ಘೋಷಣೆಗಳನ್ನು ಹೇಳಿದರು. ಎಸ್.ಡಿ.ಎಂ.ಸಿ.ಸದಸ್ಯೆ ಶೃತಿ, ಶಾಲಾ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಜಲ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿ :: ನಾನು ನನ್ನ ನಿತ್ಯ ಜೀವನದಲ್ಲಿ ನೀರನ್ನು ಪೋಲು( ಅಪವ್ಯಯ ) ಮಾಡದೇ ನಾಳಿನ ಉತ್ತಮ ಭವಿಷ್ಯಕ್ಕಾಗಿ ನೀರನ್ನು ಮಿತವಾಗಿ ಬಳುಸುವ ಮೂಲಕ ಜಲ ಸಂರಕ್ಷಣೆ ಮಾಡುತ್ತೇವೆ ಎಂದು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ಹನಿ ಹನಿ ನೀರು ಉಳಿಸಿ, ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಜಲವೇ ಜೀವಜಾಲ, ಅಂತರ್ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಮುಂದಿನ ಉತ್ತಮ ಭವಿಷ್ಯಕ್ಕಾಗಿ ನೀರನ್ನು ಸಂರಕ್ಷಿಸೋಣ ಬನ್ನಿ ಎಂಬಿತ್ಯಾದಿ ಭಿತ್ತಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಪ್ರಚುರಪಡಿಸಲಾಯಿತು.