


ಪೊನ್ನಂಪೇಟೆ ಮಾ.22 NEWS DESK : ಹನ್ನೆರಡನೇ ಶತಮಾನದಲ್ಲಿ ಇದ್ದ ರಾಜಪ್ರಭುತ್ವದ ವಿರುದ್ಧ ಪ್ರಜಾಪ್ರಭುತ್ವದ ಬೀಜ ಬಿತ್ತಿದ ಶರಣರು ಈ ರಾಷ್ಟ್ರ ಕಂಡ ಪ್ರಪ್ರಥಮ ಸ್ವಾಂತಂತ್ರ್ಯ ಚಳುವಳಿಗಾರರು ಎಂದು ವಿರಾಜಪೇಟೆ ತಾಲ್ಲೂಕು ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ವತಿಯಿಂದ ಬಿಜಾಪುರದ ಶ್ರೀ ಸಿದ್ದೇಶ್ವರ ಸಹಕಾರ ಬ್ಯಾಂಕಿನ ವತಿಯಿಂದ ಸ್ಥಾಪಿಸಿರುವ ವಚನ ಸಾಹಿತ್ಯ ಸಂವರ್ಧಕ ಡಾ.ಫ.ಗು.ಹಳಕಟ್ಟಿ ಅವರ ಜೀವನ ಹಾಗೂ ಸಾಧನೆ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜಪ್ರಭುತ್ವದ ಕಾಲದಲ್ಲಿ ಅಸಮಾನತೆಯಿಂದ ಜನ ಬಳಲಿದ್ದರು. ವೇದ, ಆಗಮ, ಉಪನಿಷತ್ತುಗಳು ಸಂಸ್ಕ್ರತ ಭಾಷೆಯಲ್ಲಿದ್ದು ಜನಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಅಂತಹ ಕಾಲದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆಯ ವಚನಗಳ ಮೂಲಕ ಬಹುದೊಡ್ಡ ಕ್ರಾಂತಿಯನ್ನು ಮಾಡಿದ ಬಸವಾದಿ ಶರಣರು ಸಮಾಜದಲ್ಲಿ ಸಮಾನತೆ ಹಾಗೂ ಮಹಿಳಾ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಜನರಲ್ಲಿ ಹೇರಿದ್ದ ಮೂಢನಂಬಿಕೆಗಳ ವಿರುದ್ಧವೂ ಸಮರ ಸಾರಿದ ಶರಣರು ಪುರೋಹಿತಶಾಹಿ ಹಾಗೂ ಪಟ್ಟಭದ್ರರ ಸ್ಥಾಪಿತ ಹಿತಾಸಕ್ತಿ ವಿರುದ್ಧ ಸಮರವನ್ನೇ ಸಾರಿದರು. ಇವನಾರವ ಎನ್ನದೇ ಇವ ನಮ್ಮವ ಎಂದು ಸಮ ಸಮಾಜದ ಪರಿಕಲ್ಪನೆಯನ್ನು ಮೊಳಗಿಸಿದರು. ಹೀಗೆ ಶರಣರು ಕಲ್ಯಾಣದಲ್ಲಿ ಮಾಡಿದ ಕ್ರಾಂತಿಯ ಬೀಜಗಳು ವಚನಗಳ ಕಟ್ಟುಗಳಲ್ಲಿದ್ದವು. ಇಂತಹ ವಚನಗಳ ಕಟ್ಟುಗಳನ್ನು ಕಲೆ ಹಾಕಿದ ಫ.ಗು.ಹಳಕಟ್ಟಿಯವರು, ವಚನಗಳನ್ನು ಸಂರಕ್ಷಿಸಿ ಅವುಗಳನ್ನು ಅಚ್ಚು ಹಾಕಲು ಪ್ರಿಂಟಿಂಗ್ ಪ್ರೆಸ್ ತೆರೆಯಲು ತಮ್ಮಲ್ಲಿ ಇದ್ದ ಆಸ್ತಿಯನ್ನೇ ಮಾರಿಕೊಂಡ ಬಗೆಯನ್ನು ಶ್ರೀಗಳು ಸವಿಸ್ತಾರವಾಗಿ ವಿಶ್ಲೇಷಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನಗಳು ಬೆಳೆದಷ್ಟು ವೇಗವಾಗಿ ನಾವು ಓಡುತ್ತಿದ್ದೇವೆ. ಆದರೆ ಶಾಂತಿ, ಸಮಧಾನ, ನೆಮ್ಮದಿಯನ್ನು ಹುಡುಕುತ್ತಿದ್ದೇವೆ. ಇಂದು ಸಾಮಾಜಿಕ ವ್ಯಸನಗಳಿಗೆ ತುತ್ತಾಗಿ ಭವಿಷ್ಯವನ್ನು ಕಳೆದುಕೊಳ್ಳುತ್ತಿರುವ ಇಂದಿನ ಯುವ ಪೀಳಿಗೆಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆ ಅತಿ ಮುಖ್ಯವಾಗಿ ಬೇಕಾಗಿದೆ. ಆದ್ದರಿಂದ ವಿಜ್ಞಾನ – ತಂತ್ರಜ್ಞಾನ ಹಾಗೂ ಸಾಮಾಜಿಕ ಮೌಲ್ಯಗಳ ಗಣಿಯಾಗಿರುವ ವಚನ ಸಾಹಿತ್ಯವನ್ನು ಇಂದಿನ ಯುವ ಜನಾಂಗ ಅರಿಯುವ ಅಗತ್ಯವಿದೆ. ಅರಿಸ್ಟಾಟಲ್ , ಪ್ಲೇಟೋ ಮೊದಲಾದ ತತ್ವಜ್ಞಾನಿಗಳಿಗೂ ಮಿಗಿಲಾಗಿ ಹನ್ನೆರಡನೇ ಶತಮಾನದ ಶರಣರು ಈ ಜಗತ್ತಿಗೆ ಸಾರಿ ಹೋಗಿರುವ ಕಲಬೇಡ ಕೊಲಬೇಡ, ಜಗದಗಲ – ಮಿಗೆಯಗಲ ಎಂಬ ಬಸವಾದಿ ಶರಣರ ವಚನಗಳು ಮಾನವನ ವ್ಯಕ್ತಿತ್ವದ ವಿಕಾಸ ಹಾಗೂ ಪ್ರಗತಿಗೆ ಅಡಿಗಲ್ಲಾಗಿವೆ ಎಂದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಸಂದೇಶ ನೀಡಿದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಅವರು, ವಚನ ಸಾಹಿತ್ಯದ ಸಂವರ್ಧನೆಯಲ್ಲಿ ಡಾ.ಫಕೀರಪ್ಪ ಗುರಪ್ಪಾ ಹಳಕಟ್ಟಿ ಅವರು ಶ್ರಮಿಸಿದ ದುರ್ಗಮ ಸನ್ನಿವೇಶಗಳನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಅರ್ಥೈಸಿದರು. ಅರಣ್ಯ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆಂಚರೆಡ್ಡಿ ಫ.ಗು.ಹಳಕಟ್ಟಿ ಜೀವನ ಹಾಗೂ ಸಾಧನೆ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು. ಕುಶಾಲನಗರದ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಪೊನ್ನಂಪೇಟೆ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಶೋಭಾರಾಣಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.ಪರಮೇಶ್, ಪೊನ್ನಂಪೇಟೆ ಮಹಾವಿದ್ಯಾಲಯದ ಆಡಳಿತಾಧಿಕಾರಿ ಎಸ್.ಸಿ.ಹೇಮಂತಕುಮಾರ್, ಪ್ರಾಧ್ಯಾಪಕರಾದ ಡಾ.ಜಡೇಗೌಡ, ಡಾ.ಸುಮನಾ, ಡಾ.ರಮ್ಯಾ, ಡಾ.ಮೋಹನಕುಮಾರ್, ಡಾ.ಮಂಜುಳ, ಡಾ.ರನೀಷಾ, ಡಾ.ನಾಣಯ್ಯ ಇದ್ದರು. ಪ್ರಾಧ್ಯಾಪಕ ಡಾ.ಬಿ.ಎನ್.ಸತೀಶ್ ಸ್ವಾಗತಿಸಿದರು. ನೇತ್ರಾವತಿ ನಿರೂಪಿಸಿದರು. ಡಾ.ಕೆ.ಎ.ಈಶ್ವರ ವಂದಿಸಿದರು.