


ಸೋಮವಾರಪೇಟೆ NEWS DESK ಮಾ.23 : ಸೋಮವಾರಪೇಟೆಯಿಂದ ಮಡಿಕೇರಿಗೆ ತೆರಳುತ್ತಿದ್ದ ಲಾರಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿರುವ ಘಟನೆ ಕಾಜೂರಿನಲ್ಲಿ ನಡೆದಿದೆ. ರಾಜ್ಯ ಹೆದ್ದಾರಿಯ ಕಾಜೂರು ಜಂಕ್ಷನ್ನ ಅರಣ್ಯ ಸಿಬ್ಬಂದಿಗಳ ವಸತಿ ಗೃಹದ ಮುಂಭಾಗದಲ್ಲಿ ಕಾಡಾನೆಗಳ ಹಿಂಡು ರಸ್ತೆ ದಾಟ್ಟುವ ಸಂದರ್ಭ ರಸ್ತೆಯಲ್ಲಿದ್ದ ಲಾರಿಯ ಸಮೀಪ ಮರಿಯಾನೆ ಓಡಿದ್ದು ಜೊತೆಯಲ್ಲೇ ಇದ್ದ ತಾಯಿ ಆನೆ ಏಕಾಏಕಿ ವಾಹನದ ಮೇಲೆ ದಾಳಿ ನಡೆಸಿದೆ. ಲಾರಿಯ ಮುಂಭಾಗದ ಗಾಜು ಸಂಪೂರ್ಣವಾಗಿ ಹಾನಿಯಾಗಿದ್ದು, ಲಾರಿ ಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಯಡವನಾಡು ಮೀಸಲು ಅರಣ್ಯದಲ್ಲಿ ನೀರು ಹಾಗು ಆಹಾರದ ಕೊರತೆಯಿಂದಾಗಿ ಹತ್ತಕ್ಕೂ ಹೆಚ್ಚು ಕಾಡಾನೆಗಳು ಐಗೂರು ಗ್ರಾಮದ ಚೋರನ ಹೊಳೆಯಲ್ಲಿ ನೀರು ಕುಡಿಯಲು ಹಾಗೂ ಸಮೀಪದ ಕಾಫಿ ತೋಟದಲ್ಲಿರುವ ಹಲಸಿನ ಹಣ್ಣಿಗಾಗಿ ಬರುತ್ತಿದೆ. ಪ್ರತಿನಿತ್ಯ ಈ ಮಾರ್ಗದಲ್ಲಿ ಕಾಡಾನೆಗಳು ಸಂಚರಿಸುತ್ತವೆ. ವಾಹನ ಸವಾರರು ಎಚ್ಚರವಹಿಸಬೇಕು. ಕಾಡಾನೆಗಳು ರಸ್ತೆ ದಾಟುವುದು ಕಂಡರೆ ದೂರದಲ್ಲೇ ವಾಹನ ನಿಲ್ಲಿಸಿಕೊಳ್ಳಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.