


ಕುಶಾಲನಗರ ಮಾ.24 NEWS DESK : ಕೊಡಗು ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ ಅಭಿಯಾನ ಯೋಜನೆಯ ಜಲ ಜೀವನ್ ಮಿಷನ್ ,
ಕಾಲೇಜು ಶಿಕ್ಷಣ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಕುಶಾಲನಗರ ಪಟ್ಟಣದ ಅನುಗ್ರಹ ಪ್ರಥಮ ದರ್ಜೆ ಕಾಲೇಜಿನಲ್ಲಿ
ರೋಟರಾಕ್ಟ್ ಕ್ಲಬ್, ರೋವರ್ಸ್ ಮತ್ತು ರೇಂಜರ್ಸ್ ವತಿಯಿಂದ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್.) ರಾಷ್ಟ್ರೀಯ ಹಸಿರು ಪಡೆ ( ಎನ್.ಜಿ.ಸಿ.), ಇಕೋ ಕ್ಲಬ್/ಭಾರತ್ ಸ್ಕೌಟ್ಸ್ ಮತ್ತು ಗೈಡ್ ನ ಸ್ಥಳೀಯ ಸಂಸ್ಥೆಯ
ಸಹಯೋಗದಲ್ಲಿ ವಿಶ್ವ ಜಲ ದಿನ: 2025 ವನ್ನು ಏರ್ಪಡಿಸಲಾಗಿತ್ತು. ಅನುಗ್ರಹ ಕಾಲೇಜಿನಲ್ಲಿ ನಡೆದ ವಿಶ್ವ ಜಲ ದಿನ ಹಾಗೂ ಜಲಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಎಚ್.ಬಿ.ಲಿಂಗಮೂರ್ತಿ, ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಕೆ ಮಾಡುವ ಮೂಲಕ ಜಲ ಸಂರಕ್ಷಣೆ ಮಾಡುವ ಅಗತ್ಯವಿದೆ ಎಂದರು.ಪ್ರಕೃತಿಯ ಅತ್ಯಮೂಲ್ಯ ಸಂಪತ್ತಾದ ನೀರನ್ನು ಅಪವ್ಯಯ ಮಾಡದೇ ಸಂರಕ್ಷಿಸುವ ಮೂಲಕ ಭವಿಷ್ಯದ ದೃಷ್ಟಿಯಿಂದ ನೀರನ್ನು ಸಂಗ್ರಹಿಸಿಡಬೇಕಾಗಿದೆ ಎಂದರು. ವಿಶ್ವ ಜಲ ದಿನ ಮತ್ತು ಜಲಸಂಪನ್ಮೂಲಗಳ ಸುಸ್ಥಿರ ಬಳಕೆಯ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ ಪರಿಸರ ಕಾರ್ಯಕ್ರಮದ ಕೊಡಗು ಜಿಲ್ಲಾ ಸಂಯೋಜಕರೂ ಆದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ನಾವು ಪ್ರಕೃತಿಯ ಅಮೂಲ್ಯ ಸಂಪತ್ತಾದ ನೀರನ್ನುನಾವು ಅಪವ್ಯಯ ಮಾಡದೇ ಭವಿಷ್ಯತ್ತಿನ ದೃಷ್ಟಿಯಲ್ಲಿ ನೀರನ್ನು ಮಿತವಾಗಿ ಬಳಕೆ ಮಾಡುವ ಮೂಲಕ ನೀರನ್ನು ಸಂರಕ್ಷಿಸಬೇಕು ಎಂದು ಮನವಿ ಮಾಡಿದರು. ನಾವು ನಿತ್ಯ ಬಳಸುವ ನೀರನ್ನು ಮರುಬಳಕೆ ಮಾಡಬೇಕು. ಮಿತಿಮೀರಿ ಕೊಳವೆ ಬಾವಿ ತೆಗೆಸುವುದರಿಂದ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಕೊಳವೆ ಬಾವಿಗಳನ್ನು ಪುನರುಜ್ಜೀನಗೊಳಿಸಬೇಕು. ಈ ಬಗ್ಗೆ ನಾವು ಮುಂಜಾಗ್ರತಾ ಕ್ರಮಗಳನ್ನು ವಹಿಸದಿದ್ದಲ್ಲಿ ಭವಿಷ್ಯತ್ತಿನಲ್ಲಿ ತೀವ್ರ ಗಂಡಾಂತರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಜಲ ಜಾಗೃತಿಯ ಪೋಷ್ಟರ್ ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಪಂಚಾಯತಿಯ ಜಲ ಜೀವನ್ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕ ಕೆ.ಪುಟ್ಟಸ್ವಾಮಿ ಮಾತನಾಡಿ, ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಸುವ ಮೂಲಕ ಮಿತವಾಗಿ ಬಳಕೆ ಮಾಡಬೇಕು ಎಂದರು. ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಸುವ ಮೂಲಕ ಮಿತವಾಗಿ ಬಳಕೆ ಮಾಡಬೇಕು ಎಂದರು. ನಾವು ನಮ್ಮ ಎಲ್ಲಾ ಜಲಮೂಲಗಳನ್ನು ಸಂರಕ್ಷಿಸು ವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಜಲಜೀವನ್ ಯೋಜನೆಯ ಸಮನ್ವಯಾಧಿಕಾರಿ ಎಚ್.ಕೆ.ಜಗ್ಗೇಶ್ ಮಾತನಾಡಿ, ನಾವು ಮಳೆಯ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಸಂರಕ್ಷಣೆಗೆ ನಾವು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು. ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ಅವರು ವಿದ್ಯಾರ್ಥಿಗಳಿಗೆ ‘ಜಲ ಸಂರಕ್ಷ ಣೆ’ ಕುರಿತಂತೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿಗಳು ಜಲ ಸಂರಕ್ಷಣೆಯ. ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಹರ್ಷಿತಾ, ಉಪನ್ಯಾಸಕರಾದ ನಜ್ರತ್ ಬಾನು , ಅಶ್ವಿನಿ, ರೋಟ್ಯಾಕ್ಟ್ ಘಟಕದ ಅಧ್ಯಕ್ಷ ದರ್ಶನ್ , ಕಾಲೇಜಿನ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ನಡೆದ ಜಲ ಜಾಗೃತಿ ಅಭಿಯಾನದಲ್ಲಿ ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ಹನಿ ಹನಿ ನೀರು ಉಳಿಸಿ, ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಜಲವೇ ಜೀವಜಾಲ, ಅಂತರ್ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಮುಂದಿನ ಉತ್ತಮ ಭವಿಷ್ಯಕ್ಕಾಗಿ ನೀರನ್ನು ಸಂರಕ್ಷಿಸೋಣ ಬನ್ನಿ ಎಂಬಿತ್ಯಾದಿ ಭಿತ್ತಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಪ್ರಚುರಪಡಿಸಲಾಯಿತು.