


ಮಡಿಕೇರಿ ಮಾ.24 NEWS DESK : ಇಡೀ ವಿಶ್ವದ ಗಮನ ಸೆಳೆದಿರುವ ಕೊಡವ ಕುಟುಂಬ ತಂಡಗಳ ನಡುವಿನ ಹಾಕಿ ಉತ್ಸವ ಈ ಬಾರಿ ‘ಮುದ್ದಂಡ ಕಪ್ ಹಾಕಿ ಉತ್ಸವ’ದ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಲಿ ಮತ್ತು ರಾಷ್ಟ್ರೀಯ ಕ್ರೀಡಾಪಟುಗಳು ಉದಯವಾಗಲಿ ಎಂದು ಅರೆಕಾಡು ಹೊಸ್ಕೇರಿಯ ಕೊಡವ ವೆಲ್‍ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಆಶಯ ವ್ಯಕ್ತಪಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಅಸೋಸಿಯೇಷನ್ ನ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಅವರು, 1997ರಿಂದ ಆರಂಭಗೊಂಡ ಕೊಡವ ಹಾಕಿ ಉತ್ಸವ ಈ ಬಾರಿ 396 ತಂಡಗಳ ನೋಂದಣಿ ಮೂಲಕ ಹೊಸ ದಾಖಲೆಯನ್ನೇ ನಿರ್ಮಿಸಿದೆ. ಕೊಡವ ಹಾಕಿ ಹಬ್ಬದ ಜನಕರಾದ ಪಾಂಡಂಡ ಕುಟ್ಟಪ್ಪ ಅವರು ಕಂಡ ಕನಸು ನನಸಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಮಾ.28 ರಿಂದ ಏ.27 ರವರೆಗೆ ನಡೆಯುವ ಹಾಕಿ ಉತ್ಸವದಲ್ಲಿ ಕ್ರೀಡಾಪಟುಗಳು ಹೆಚ್ಚು ಉತ್ಸಾಹದಿಂದ ಪಾಲ್ಗೊಂಡು ರಾಷ್ಟ್ರೀಯ ಹಾಕಿಯಲ್ಲಿ ಸ್ಥಾನ ಗಳಿಸುವಂತ್ತಾಗಲಿ ಎಂದು ತಿಳಿಸಿದ್ದಾರೆ. ಹಾಕಿ ಹಬ್ಬದ ಯಶಸ್ಸಿಗೆ ಎಲ್ಲರ ಸಹಕಾರದ ಅಗತ್ಯವಿದೆ, ಕ್ರೀಡಾಭಿಮಾನಿಗಳು ಒಂದು ತಿಂಗಳ ಕಾಲ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಾಕಿಪಟುಗಳಿಗೆ ಪ್ರೋತ್ಸಾಹ ನೀಡಬೇಕು. ಮಿನಿ ಒಲಂಪಿಕ್ಸ್ ಮಾದರಿಯಲ್ಲಿ ಹಾಕಿ ಉತ್ಸವವನ್ನು ನಡೆಸಲು ಆಯೋಜಕರಾದ ಮುದ್ದಂಡ ಕುಟುಂಬಕ್ಕೆ ಸರ್ವರೂ ಬಲ ತುಂಬಬೇಕು. ರಾಷ್ಟ್ರೀಯ ಮಟ್ಟಕ್ಕೆ ಹಾಕಿ ಪಟುಗಳನ್ನು ಕೊಡುಗೆಯಾಗಿ ನೀಡುತ್ತಿರುವ ಮತ್ತು ಹಾಕಿ ಕ್ರೀಡೆಗೆ ಸ್ಫೂರ್ತಿ ತುಂಬುತ್ತಿರುವ ಕೊಡವ ಹಾಕಿ ಹಬ್ಬಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಿ ಉತ್ತೇಜನ ನೀಡಬೇಕು. ಕೊಡಗಿನ ಯುವ ಸಮೂಹ ಹಾಕಿ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿ ಹಾಕಿ ಉತ್ಸವವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಬೇಕು ಎಂದು ವಿವರಿಸಿರುವ ಕುಕ್ಕೇರ ಜಯ ಚಿಣ್ಣಪ್ಪ ಅವರು, ಕೊಡವ ವೆಲ್‍ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಹಾಕಿಯನ್ನು ಪ್ರೋತ್ಸಾಹಿಸುವ ಕಾರ್ಯಕ್ಕೆ ಕೈಜೋಡಿಸಲಿದೆ ಎಂದು ಹೇಳಿದ್ದಾರೆ.