


ಸೋಮವಾರಪೇಟೆ ಮಾ.26 NEWS DESK : ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಪ್ರಥಮ ವರ್ಷದ ವಾರ್ಷಿಕ ಮಹಾಸಭೆ ಸೋಮವಾರಪೇಟೆ ಸಂಕಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ತಾಲೂಕಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಹೋರಾಟ ಸಮಿತಿಯನ್ನು ರಚಿಸಲಾಗಿದ್ದು, ಶಾಸಕಾಂಗ ಮತ್ತು ಕಾರ್ಯಾಂಗದ ಮೂಲಕ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು. ಈಗಾಗಲೇ ಗ್ರಾಮೀಣ ಭಾಗಗಳಿಗೆ ಬಸ್ ಸೇವೆ, ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳ ನಿವಾರಣೆ, ನೂತನ ಹೋಬಳಿ ಕಚೇರಿಗಳ ಸ್ಥಾಪನೆ, ರಸ್ತೆಗಳ ಅಭಿವೃದ್ಧಿ, ಮೂಲಭೂತ ಸೌಕರ್ಯ, ಜಾಗದ ದಾಖಲಾತಿ ಸಮಸ್ಯೆ, ಸಿ ಮತ್ತು ಡಿ ಜಾಗದ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಇಲಾಖೆ, ಶಾಸಕರು, ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಸಮಿತಿಯ ಕೆಲವೊಂದು ಬೇಡಿಕೆಗಳಿಗೆ ಸ್ಪಂದನೆ ಲಭಿಸಿದ್ದು, ಉಳಿದ ಬೇಡಿಕೆಗಳ ಈಡೇರಿಕೆಗಾಗಿ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದರು. ಸಂಘದ ಆಡಳಿತ ಮಂಡಳಿ ವರದಿಯನ್ನು ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಲೆಕ್ಕಪತ್ರವನ್ನು ಖಜಾಂಚಿ ತ್ರಿಶೂಲ್ ಕಾರ್ಯಪ್ಪ ಮಂಡಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಎನ್. ದೀಪಕ್, ಸಹ ಕಾರ್ಯದರ್ಶಿ ಮೋಹಿತ್, ಕಾನೂನು ಸಲಹೆಗಾರ ಶ್ರೀನಿಧಿ ಲಿಂಗಪ್ಪ, ಕೆ.ಡಿ. ಜೀವನ್ ಅವರುಗಳು ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ :: ಸಂಘದ ವಾರ್ಷಿಕ ಮಹಾಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ತಾಲೂಕಿನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಉಚ್ಛ ನ್ಯಾಯಾಲಯದ ವಕೀಲರಾದ ಅಮೃತೇಶ್, ನಿವೃತ್ತ ನ್ಯಾಯಾಧೀಶರಾದ ಮುಳ್ಳೂರು ದೇವಪ್ಪ, ನ್ಯಾಕ್ ಸಮಿತಿ ಸದಸ್ಯ ಕಿತ್ತೂರು ಸುರೇಶ್, ಕೃಷಿ ಕ್ಷೇತ್ರದಲ್ಲಿ ಸಾಧನೆ ತೋರುತ್ತಿರುವ ಕೊತ್ನಳ್ಳಿ ಗ್ರಾಮದ ರತಿ, ನಿವೃತ್ತ ತಹಶೀಲ್ದಾರ್ ಜಯರಾಂ, ಮುಳ್ಳೂರು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸತೀಶ್, ನಾವು ಪ್ರತಿಷ್ಠಾನದ ನಿರ್ದೇಶಕಿ ಸುಮನ ಗೌತಮ್, ಸಾಹಸ ಕ್ರೀಡೆಯ ಸಾಧಕ ಕಲ್ಕಂದೂರಿನ ವಿಕ್ರಂ ಸಾಗರ್, ಪೊಲೀಸ್ ಇಲಾಖೆಯ ಸಿಬ್ಬಂದಿ ಬಳಗುಂದ ಗ್ರಾಮದ ಮನಮೋಹನ್ ಅವರುಗಳನ್ನು ಸನ್ಮಾನಿಸಲಾಯಿತು. ಕುಶಾನಿ ಮಂಜುನಾಥ್ ಪ್ರಾರ್ಥಿಸಿದರು. ಸಂಘದ ಸಲಹೆಗಾರ ಜಿ.ಎಂ.ಹೂವಯ್ಯ, ಸದಸ್ಯರುಗಳಾದ ಯಡೂರು ಪ್ರದೀಪ್, ಗೌತಮ್, ರಕ್ಷಿತ್ ಶನಿವಾರಸಂತೆ, ಬಿ.ವಿ. ರವಿ, ಉದಯ್ ದೊಡ್ಡಮಳ್ತೆ, ಅನಂತ್ ಕಲ್ಕಂದೂರು, ವಿಜಯ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.