




ಮಡಿಕೇರಿ ಮಾ.27 NEWS DESK : ಹೊದ್ದೂರು ಗ್ರಾಮದಲ್ಲಿ ರೈತರ ಪಿತ್ರಾರ್ಜಿತ ಆಸ್ತಿ ಮತ್ತು ಸರಕಾರಿ ಜಾಗದಲ್ಲಿ ಕೆಲವರು ಅಕ್ರಮವಾಗಿ ನಿರ್ಮಿಸಿಕೊಂಡಿರುವ ಶೆಡ್ ಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಹೊದ್ದೂರಿನಿಂದ ಮಡಿಕೇರಿಯವರೆಗೆ ಬೃಹತ್ ಪ್ರತಿಭಟನಾ ಜಾಥಾ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಹೊದ್ದೂರು ಘಟಕ ಎಚ್ಚರಿಕೆ ನೀಡಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊದ್ದೂರು ರೈತ ಸಂಘದ ಸದಸ್ಯ ಚೆಟ್ರುಮಾಡ ಎಂ.ಬಾಲಕೃಷ್ಣ, ಹೊದ್ದೂರು ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಬರುತ್ತಿರುವ ರೈತರ ಪಿತ್ರಾರ್ಜಿತ ಆಸ್ತಿ ಮತ್ತು ಸರಕಾರಿ ಜಾಗದಲ್ಲಿ ಹೊದ್ದೂರು ಗ್ರಾ.ಪಂ ಸದಸ್ಯರೊಬ್ಬರು ಅಕ್ರಮ ಶೆಡ್ ನಿರ್ಮಿಸಿ ಕಿರುಕುಳ ನೀಡುತ್ತಿದ್ದಾರೆ. ಅಕ್ರಮ ಶೆಡ್ ಗಳ ನಿರ್ಮಾಣದ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ದೂರು ಸಲ್ಲಿಸಿದರೂ ಇದುವರೆಗೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಕಳೆದ ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ನ್ಯಾಯಯುತವಾಗಿ ಜೀವನ ಸಾಗಿಸುತ್ತಿರುವವರನ್ನು ಒಕ್ಕಲೆಬ್ಬಿಸಲು ನಡೆಸುತ್ತಿರುವ ಪ್ರಯತ್ನಗಳು ಖಂಡನೀಯ ಮತ್ತು ಈ ಪ್ರಕರಣವನ್ನು ಆಡಳಿತ ವ್ಯವಸ್ಥೆ ಗಂಭೀರವಾಗಿ ಪರಿಗಣಿಸಬೇಕು. ಅಕ್ರಮ ಶೆಡ್‍ಗಳನ್ನು ತೆರವುಗೊಳಿಸಿ ಅದೇ ಜಾಗವನ್ನು ರೈತರಿಗೆ ಮರು ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿದರು. ಸಂಘದ ಕಾರ್ಯಾಧ್ಯಕ್ಷ ಪಿ.ಎಂ.ವಾಸುದೇವ ಮಾತನಾಡಿ, ಹೊದ್ದೂರು ಗ್ರಾಮದಲ್ಲಿ ಒಟ್ಟು 9 ಕಾಲೋನಿಗಳಿದ್ದು, 1500 ಕ್ಕಿಂತಲೂ ಹೆಚ್ಚಿನ ಮನೆ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಹೊದ್ದೂರು ಗ್ರಾಮದಲ್ಲಿ ವಸತಿ ರಹಿತರಿಗೆ ನಿವೇಶನ ಕೊಡುವುದನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು. ತಹಶೀಲ್ದಾರರು ನೀಡಿರುವ ಭರವಸೆಯಂತೆ ನಿಗದಿತ ಸಮಯದೊಳಗೆ ತೆರವುಗೊಳಿಸದೆ ಇದ್ದಲ್ಲಿ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣಕ್ಕೆ ಬಿಟ್ಟುಕೊಟ್ಟಂತಹ ಪಿತ್ರಾರ್ಜಿತ ಆಸ್ತಿಗೆ ರೈತ ಸಂಘದ ವತಿಯಿಂದ ಬೇಲಿ ನಿರ್ಮಿಸಿ ವಶಕ್ಕೆ ಪಡೆದು ಕೃಷಿ ಕಾರ್ಯ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ರಾಜ್ಯ ರೈತ ಸಂಘ ಜಿಲ್ಲಾ ರೈತ ಸಂಘದ ಸಹಯೋಗದೊಂದಿಗೆ ಬೃಹತ್ ಜಾಥಾ ಹಮ್ಮಿಕೊಳ್ಳಲಾಗುವುದು. ಮುಂದೆ ಆಗಬಹುದಾದ ಕಷ್ಟ-ನಷ್ಟಗಳಿಗೆ ಜಿಲ್ಲಾಡಳಿತ, ಪಂಚಾಯಿತಿ ಹಾಗೂ ಸಂಬಂಧಪಟ್ಟ ವ್ಯಕ್ತಿಯೇ ನೇರ ಹೊಣೆಯಾಗಬೇಕಾಗುತ್ತದೆ ಎಂದರು. ಹೊದ್ದೂರು ರೈತ ಸಂಘ ಹಾಗೂ ಜಿಲ್ಲಾ ರೈತ ಸಂಘದ ಸಹಯೋಗದೊಂದಿಗೆ 2025 ಮಾರ್ಚ್ 15 ರಂದು ಹೊದ್ದೂರು ಗ್ರಾಮದಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಲಾಗಿದೆ, ಆ ಸಂದರ್ಭ ಹಾಜರಿದ್ದ ಮಡಿಕೇರಿ ತಹಶೀಲ್ದಾರರಿಗೆ 15 ದಿನಗಳ ಒಳಗೆ ಶೆಡ್ ತೆರವುಗೊಳಿಸುವಂತೆ ಮನವಿಪತ್ರ ನೀಡಲಾಗಿತ್ತು. ಕುಂಬಳದಾಳು ರಸ್ತೆಯ ಪೆಗ್ಗೋಲಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಶೆಡ್‍ಗಳನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಈ ಜಾಗಕ್ಕೆ ನಾವುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅದು ವಾಸಕ್ಕೆ ಯೋಗ್ಯವಾಗಿಲ್ಲ. ಅಲ್ಲದೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ವರದಿಯಲ್ಲೂ ವಾಸಕ್ಕೆ ಯೋಗ್ಯ ಜಾಗವಲ್ಲವೆಂದು ತಿಳಿಸಲಾಗಿದೆ ಎಂದರು. ಹೊದ್ದೂರಿನಲ್ಲಿ ವಸತಿ ರಹಿತರಿಗೆ ನಿವೇಶನ ನೀಡುವ ವಿಚಾರದಲ್ಲಿ ನಮ್ಮ ಅಭ್ಯಂತರವಿಲ್ಲ, ಸರಕಾರದ ಆದೇಶದಂತೆ ನೀಡುವುದಾದರೆ ನೀಡಲಿ. ಆದರೆ ಸರಕಾರದ ಯಾವುದೇ ಮಾನದಂಡವನ್ನು ಅನುಸರಿಸದೆ, ಪರ ಊರಿನಿಂದ ಬಂದಂತಹ ಜನರಿಗೆ ನಿವೇಶನ ಕೊಡಿಸುವ ಲಾಬಿ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯಿಂದ ಮಾಹಿತಿ ಹಕ್ಕು ನಿಯಮದಡಿ ಮಾಹಿತಿ ಕೇಳಿದಾಗ ಇಲ್ಲಿಯವರೆಗೆ ನೀಡಿಲ್ಲ ಎಂದು ಆರೋಪಿಸಿದರು. ರೈತ ಸಂಘದ ಸದಸ್ಯ ಚೆಟ್ಟಿಮಾಡ ಲೋಕೇಶ್ ಮಾತನಾಡಿ, ಕುಂಬಳದಾಳು ರಸ್ತೆಯಲ್ಲಿರುವ ತೆಕ್ಕಡೆ ಎಸ್.ಸೋಮಣ್ಣ ಅವರು ಸಾರ್ವಜನಿಕ ರಸ್ತೆಗಾಗಿ ಕಾಫಿ ಮತ್ತು ಕಾಳುಮೆಣಸು ಕೃಷಿ ಮಾಡಿರುವ ಸುಮಾರು 1 ಏಕರೆ ಭೂಮಿಯನ್ನು ಬಿಟ್ಟುಕೊಟ್ಟಿದ್ದಾರೆ. ಇದಕ್ಕೆ ಬದಲಿಯಾಗಿ ಪಕ್ಕದಲ್ಲಿರುವ ಸರಕಾರದ ಜಾಗವನ್ನು ಕೃಷಿ ಮಾಡಲು ತಿಳಿಸಿದ್ದು, ಈ ಜಮೀನಿನಲ್ಲಿ ಕಳೆದ 20 ವರ್ಷಗಳಿಂದ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಅಲ್ಲದೆ, ಇದೇ ರಸ್ತೆಗೆ ಬಡುವಂಡ ದೇವಿ ಸುಬ್ರಮಣಿ ಎಂಬುವವರು ಒಂದು ಏಕರೆಗಿಂತಲೂ ಹೆಚ್ಚಿನ ಜಾಗವನ್ನು ಕಾಫಿ ಹಾಗೂ ಕಾಳುಮೆಣಸಿನ ಗಿಡಗಳನ್ನು ಕಡಿದು ಬಿಟ್ಟುಕೊಟ್ಟಿದ್ದಾರೆ. ಇದಕ್ಕೆ ಬದಲಿಯಾಗಿ ಪಕ್ಕದ ಸರಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದು, ಈಗ ಕೃಷಿ ಮಾಡಿರುವ ಕಾಫಿ ತೋಟದಲ್ಲಿ ಪಂಚಾಯಿತಿ ಸದಸ್ಯನ ಕುಮ್ಮಕ್ಕಿನಿಂದ ಕೆಲವರು ಶೆಡ್ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಮಾತನಾಡಿ, ಸರಕಾರಿ ಜಮೀನಿನಲ್ಲಿ ನಿವೇಶನ ಕೊಡಲು ಸರಕಾರ, ಜಿಲ್ಲಾಡಳಿತವಿದ್ದು, ಪಂಚಾಯಿತಿ ಸದಸ್ಯನಿಗೆ ಯಾವ ಅಧಿಕಾರವಿದೆ. ಆತ ಕಾನೂನು ಉಲ್ಲಂಘಿಸಿದರೂ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಸರಕಾರ ಹಾಗೂ ಜಿಲ್ಲಾಡಳಿತ ಮೌನಕ್ಕೆ ಶರಣಾಗಿದ್ದು, ಅಸಾಹಯಕ ಪರಿಸ್ಥಿತಿಯಲ್ಲಿದೆ ಎಂದು ಟೀಕಿಸಿದರು. ರಾತ್ರೋರಾತ್ರಿ ಅಕ್ರಮ ಪ್ರವೇಶಮಾಡಿ ನೂರಾರು ಕಾಫಿ ಗಿಡಗಳನ್ನು ಕಡಿದು ಶೆಡ್ ನಿರ್ಮಿಸಿರುವುದು ಸರಿಯಾದ ಕ್ರಮವಲ್ಲ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ರೈತ ಸಂಘದ ವತಿಯಿಂದ ಕೊಡಗಿನ ವಿವಿಧ ರೈತ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಹೊದ್ದೂರಿನಿಂದ ಮಡಿಕೇರಿಯ ಜಿಲ್ಲಾಡಳಿತದ ಕಚೇರಿವರೆಗೆ ಬೃಹತ್ ಜಾಥಾ ನಡೆಸಲಾಗುವುದು. ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ಮಾತುಕತೆಯ ಮೂಲಕ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಹಾಗೂ ಹೊದ್ದೂರು ಘಟಕದ ಬಡುವಂಡ ಸುಬ್ರಮಣಿ ಉಪಸ್ಥಿತರಿದ್ದರು.