




ಮೂರ್ನಾಡು ಮಾ.27 NEWS DESK : ಕೊಡಗು ಜಿಲ್ಲೆಯ ಐರಿ ಜನಾಂಗದ ನಡುವಿನ 11ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ಈ ಬಾರಿ ಮೂರ್ನಾಡು ಹೋಬಳಿ, ಹೊದ್ದೂರು ಗ್ರಾಮದ ಅಮ್ಮಣಂಡ ಕುಟುಂಬಸ್ಥರು ಆತಿಥ್ಯವಹಿಸಲಿದ್ದು, ಏ.25, 26 ಮತ್ತು 27 ರಂದು ಮೂರ್ನಾಡುವಿನ ದಿ. ಬಾಚೆಟ್ಟಿರ ಲಾಲೂ ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅಮ್ಮಣಂಡ ಕಪ್ ಕ್ರಿಕೆಟ್ ಕ್ರೀಡಾಕೂಟದ ಸಂಚಾಲಕ ಅಮ್ಮಣಂಡ ದೀಪಕ್ ಮತ್ತು ಅಮ್ಮಣಂಡ ನಿಖಿಲ್, ಕ್ರಿಕೆಟ್ ಸ್ಪರ್ಧೆಯ ಜೊತೆಗೆ ಮಹಿಳೆಯರಿಗೆ ಹಗ್ಗಜಗ್ಗಾಟ, ಹಿರಿಯರಿಗೆ ಹಾಗೂ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ 20ಕ್ಕೂ ಅಧಿಕ ಕುಟುಂಬಗಳು ಭಾಗವಹಿಸುವ ನಿರೀಕ್ಷೆ ಇದೆ. ಐರಿ ಜನಾಂಗದಲ್ಲಿ 80ಕ್ಕು ಹೆಚ್ಚು ಮನೆತನಗಳಿದ್ದು, ಎಲ್ಲಾ ಕುಟುಂಬಗಳು ಕ್ರಿಕೆಟ್ ಹಾಗೂ ಹಗ್ಗ ಜಗ್ಗಾಟದಲ್ಲಿ ಪಾಲ್ಗೊಳ್ಳುವ ಮೂಲಕ ಜನಾಂಗ ಬಾಂಧವರು ಪರಸ್ಪರ ಅರಿಯಲು ನೆರವಾಗುವಂತೆ ಕರೆ ನೀಡಿದರು. ಕ್ರೀಡಾ ಹಬ್ಬದ ಸಂದರ್ಭ ಐರಿ ಜನಾಂಗದಲ್ಲಿ ಆಯ್ದ 10 ಮಂದಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಗುತ್ತದೆ. ಏ.25 ರಂದು ನಡೆಯುವ ಸಮಾರಂಭಕ್ಕೆ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಕ್ರೀಡಾ ಕೂಟ ಉದ್ಘಾಟಕರಾಗಿ ಆಗಮಿಸಲಿದ್ದು, ಇವರ ಜೊತೆ ಅರಣ್ಯಾಧಿಕಾರಿ ಸೋಮವಾರಪೇಟೆ ವಲಯದ ಎಸಿಎಫ್ ಐರೀರ ಗೋಪಾಲ್, ಐರಿ ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್, ಅಮ್ಮಣಂಡ ಕುಟುಂಬದ ಪಟ್ಟೇದಾರ ಸುಬ್ಬಯ್ಯ, ಐರಿ ಸಮಾಜದ ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ, ಪೊಲೀಸ್ ಇಲಾಖೆಯ ನಿವೃತ್ತ ಎಎಸ್ಐ ಐಮಾಲಂಡ ಬಿದ್ದಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಏ.27 ರಂದು ನಡೆಯುವ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ, ಕೊಡವ ಭಾಷಿಕ ಒಕ್ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ, ಚಿಕ್ಕಮಗಳೂರು ಅರಣ್ಯಾಧಿಕಾರಿ ಎಸಿಎಫ್ ಮಾಲೆರ ಚರಣ್, ವಿರಾಜಪೇಟೆ ಶಿರಸ್ತೇದಾರ್ ಅಂಜಪಂಡ ಪ್ರಕಾಶ್, ರೈಲ್ವೇ ಇಲಾಖೆಯ ಹಿರಿಯ ಅಭಿಯಂತರ ಅಪ್ಪಚ್ಚಂಡ ಸುರೇಶ್, ಮಾಜಿ ಸೈನಿಕ ಬಬ್ಬೀರ ತಿಮ್ಮಯ್ಯ ಸೇರಿದಂತೆ ಹಲವು ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟದಲ್ಲಿ ವಿಜೇತರಾಗುವ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕ್ರಿಕೆಟ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡಗಳು ಏಪ್ರಿಲ್ 15ರ ಒಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ 9141292155, 7349063688 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.