




ಮಡಿಕೇರಿ ಏ.1 NEWS DESK : ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ಅವರ 119ನೇ ಜನ್ಮ ದಿನಾಚರಣೆಯನ್ನು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಜನ್ಮದಿನಾಚರಣೆ ಪ್ರಯುಕ್ತ ಜನರಲ್ ತಿಮ್ಮಯ್ಯ ವೃತ್ತದಲ್ಲಿರುವ ಅವರ ಪ್ರತಿಮೆಗೆ ಅತಿಥಿಗಳು, ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸಿದರು. ನಂತರ ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಪ್ರಥಮ ಬಾರಿಗೆ ಆರಂಭಿಸಿದ ಸುದ್ದಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ನಿವೃತ್ತ ಲೆಫ್ಟಿನೆಂಟ್ ಜನರಲ್, ಸೇನಾಮೆಡಲ್, ವಿಶಿಷ್ಟ ಸೇವಾ ಮೆಡಲ್ ಪುರಸ್ಕೃತ ಪ್ರಸಾದ್, ವಿದ್ಯಾರ್ಥಿಗಳು ಭವಿಷ್ಯದ ಪ್ರೇರಣಾಶಕ್ತಿಯಾಗಿ ಬೆಳೆಯಬೇಕು, ಜನರಲ್ ತಿಮ್ಮಯ್ಯನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡುವ ಸಮಾಜ ಮತ್ತು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ಜನರಲ್ ತಿಮ್ಮಯ್ಯ ಸಾಧನೆ ಬಗ್ಗೆ ವಿವರಿಸಿದರಲ್ಲದೇ, ಅವರ ಚರಿತ್ರೆಯನ್ನು ನೆನಪಿಸುವ ಮ್ಯೂಸಿಯಂಅನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮಕ್ಕಳ ಪ್ರತಿಭೆಯನ್ನು ಹೇಗೆ ಉಪಯೋಗಿಸಬೇಕು, ಅದನ್ನು ಹೊರ ತರುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಮಕ್ಕಳು ಪ್ರೀತಿ ವಿಶ್ವಾಸದಿಂದ ಶಿಕ್ಷಣವನ್ನು ಕಲಿತರೆ ಮುಂದೆ ಉತ್ತಮ ಪ್ರಜೆಗಳಾಗಿ ಬಾಳಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಕೇಕಡ ದೇವಯ್ಯ, ಆಡಳಿತ ಅಧಿಕಾರಿ ಎನ್.ಎ.ಪೊನ್ನಮ್ಮ, ಸಂಚಾಲಕರಾದ ಕನ್ನಂಡ ಕವಿತಾ ಬೊಳ್ಳಪ್ಪ, ಪ್ರಾಂಶುಪಾಲೆ ಎಂ.ಜಿ. ಸವಿತಾ, ಆಡಳಿತಮಂಡಳಿ ಹಾಗೂ ಇತರ ಗಣ್ಯರು, ಶಿಕ್ಷಕರು, ಶಿಕ್ಷಕೇತರ ವರ್ಗದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಲಕ್ಷ್ಯ.ಪಿ. ದಿನೇಶ್ ಸ್ವಾಗತಿಸಿ ಸಾನ್ವಿ ವಂದಿಸಿದರು. ಆದ್ಯಾ ದೇಚಮ್ಮ ಮತ್ತು ದಿಯಾಚೋಂದಮ್ಮ ನಿರೂಪಿಸಿದರು. ಎನ್‍ಸಿಸಿ ವಿದ್ಯಾರ್ಥಿ ನಾಯಕರುಗಳಾದ ತರುಣ್, ಸ್ವರೂಪ್, ನೀಕ್ಷಾ ಅತಿಥಿಗಳನ್ನು ಸ್ವಾಗತಿಸಿ, ಕರೆತಂದು ಮಹಾದಂಡ ನಾಯಕನ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ವಿದ್ಯಾರ್ಥಿಗಳು ಪಥಸಂಚನದ ಮೂಲಕ ಅತಿಥಿಗಳಿಗೆ ಗೌರವವಂದನೆಯನ್ನು ಸಲ್ಲಿಸಿದರು. ಆರ್.ಅನನ್ಯ ಜನರಲ್ ಕೆ.ಎಸ್ ತಿಮ್ಮಯ್ಯ ಅವರ ಇತಿಹಾಸವನ್ನು ಪರಿಚಯಿಸಿದರು. ಸ್ವರೂಪ್ ಎನ್‍ಸಿಸಿ ವಾರ್ಷಿಕ ವರದಿಯನ್ನು ವಾಚಿಸಿದರು. ಅತಿಥಿಗಳನ್ನು ಶಿಕ್ಷಕಿ ದಿವ್ಯಹೊಳ್ಳ ಪರಿಚಯಿಸಿದರು. ಶಾಲಾ ಚಟುವಟಿಕೆಯಲ್ಲಿ ಪಾಲ್ಕೊಂಡು ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳಾಗಿ ಯುಕ್ತಾನೀಲಮ್ಮ, ಧ್ರವ ನಂಜಪ್ಪ, ಜನೀಷಾ ಸುಬ್ರಮಣಿ ಹೊರಹೊಮ್ಮಿದರು. ಶಾಲೆಯಲ್ಲಿ ನಡೆಸಲಾದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.