





ಮಡಿಕೇರಿ ಏ.3 NEWS DESK : ನಕಲಿ ಜಾತಿ ಪ್ರಮಾಣ ಪತ್ರಗಳ ಮೂಲಕ ಸರ್ಕಾರದ ಸೌಲಭ್ಯಗಳಿಂದ ನೈಜ ಆದಿವಾಸಿಗಳನ್ನು ವಂಚಿಸಲಾಗುತ್ತಿದೆಯೆಂದು ಆರೋಪಿಸಿ, ಈ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಏ.4 ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆಯೆಂದು ಆದಿವಾಸಿ ಸಂಘಟನೆಗಳ ಒಕ್ಕೂಟ ತಿಳಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಜೇನುಕುರುಬರ ಅಭಿವೃದ್ಧಿ ಸಮಿತಿಯ ಸಂಘಟನಾ ಸಂಚಾಲಕರಾದ ಜೆ.ಟಿ.ಕಾಳಿಂಗ ಮಾತನಾಡಿ, ವಿವಿಧ ಆದಿವಾಸಿ ಸಂಘಟನೆಗಳು, ದಲಿತ ಪರ ಸಂಘಟನೆUಳು, ಪ್ರಗತಿಪರ ಸಂಘಟನೆಗಳನ್ನು ಒಳಗೊಂಡಂತೆ ಏ.4ರಂದು ಬೆಳಗ್ಗೆ ನಗರದ ಸುದರ್ಶನ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದೆಂದು ತಿಳಿಸಿದರು. ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಬಳಸಿಕೊಂಡು ಪ್ರಸ್ತುತ ಸರ್ಕಾರದಿಂದ ಆದಿವಾಸಿಗಳಿಗೆ ಮೀಸಲಾದ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇದರಿಂದ ಆದಿವಾಸಿಗಳ ಅಭ್ಯುzಯಕ್ಕಾಗಿ ಮೀಸಲಾದ ಶೈಕ್ಷಣಿಕವಾದ, ಸಾಮಾಜಿಕವಾದ ಹತ್ತಾರು ಸರ್ಕಾರಿ ಯೋಜನೆಗಳು ನೈಜ ಆದಿವಾಸಿಗಳಿಗೆ ತಲುಪುತ್ತಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತನಿಖೆಗೆ ಆಗ್ರಹ :: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಭೀಮ ವಾದ)ಯ ರಾಜ್ಯ ಸಂಘಟನಾ ಸಂಚಾಲಕ ಕೆ.ಬಿ.ರಾಜು ಮಾತನಾಡಿ, ರಾಜ್ಯ ವ್ಯಾಪಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಬಳಸಿಕೊಂಡು ಇತರರು ಆದಿವಾಸಿಗಳ, ಪರಿಶಿಷ್ಟರ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ಕೊಡಗು ಜಿಲ್ಲೆಯಲ್ಲೂ ಸಾಕಷ್ಟು ದುರುಪಯೋಗಗಳು ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಮತ್ತು ಜಾತಿ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ಅಗತ್ಯ ನಿರ್ಬಂಧಗಳನ್ನು ವಿಧಿಸುವ ಅಗತ್ಯವಿರುವುದಾಗಿ ತಿಳಿಸಿದರು. ಸೋಲಿಗ ಅಭಿವೃದ್ಧಿ ಸಮಿತಿ ಜಿಲ್ಲಾಧ್ಯಕ್ಷರಾದ ಬಿ.ಬಿ.ಮಹೇಶ್ ಮಾತನಾಡಿ, ಈ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ನಕಲಿ ಜಾತಿ ಪ್ರಮಾಣ ಪತ್ರದಿಂದ ಆದಿವಾಸಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮನವಿಯನ್ನು ನೀಡಲಾಗಿದೆ.ಈ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಂಗಸಮುದ್ರದ ಮಾವಿನಹಳ್ಳ ಅರಣ್ಯ ಹಕ್ಕು ಸಮಿತಿಯ ಕಾರ್ಯದರ್ಶಿ ಜೆ.ಎಸ್.ಪಾಪಣ್ಣ, ದಸಂಸ(ಭೀಮ ವಾದ)ದ ಜಿಲ್ಲಾ ಸಂಚಾಲಕ ಬಿ.ಎಸ್.ರಮೇಶ್, ರಾಜ್ಯ ಸೋಲಿಗ ಅಭಿವೃದ್ಧಿ ಸಮಿತಿಯ ಸಂಘಟನಾ ಸಂಚಾಲಕ ಬಿ.ಹೆಚ್.ಸಿದ್ಧಲಿಂಗ ಉಪಸ್ಥಿತರಿದ್ದರು.