ಮಡಿಕೇರಿ ಡಿ.22 NEWS DESK : ಮೂರ್ನಾಡು ಆಪ್ತಮಿತ್ರ ಬಳಗದ ಸೇವಾರ್ಥವಾಗಿ ಫೆ.1 ರಂದು ‘ಮೂರ್ನಾಡು ಯಕ್ಷೋತ್ಸವ’ ನಡೆಯಲಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ಪೂರ್ವಭಾವಿ ಸಭೆಯಲ್ಲಿ ವಿವಿಧ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಮೂರ್ನಾಡಿನ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಫೆ.1 ರಂದು ಮೂರ್ನಾಡಿನ ಪಾಂಡಾಣೆ ನಾಡ್ಮಂದ್ ಮತ್ತು ಸರಕಾರಿ ಶಾಲಾ ಮೈದಾನದಲ್ಲಿ ಗಜ ಮೇಳವೆಂದೆ ಪ್ರಖ್ಯಾತಿ ಪಡೆದಿರುವ ಶ್ರೀ ಹನುಮಗಿರಿ ಮೇಳದವರಿಂದ ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟ ನಡೆಸಲು ನಿರ್ಧರಿಸಲಾಯಿತು. ಕಳೆದ ಮೂರು ವರ್ಷಗಳಿಂದ ‘ಮೂರ್ನಾಡು ಯಕ್ಷೋತ್ಸವ’ವನ್ನು ಅತ್ಯಂತ ಅದ್ದೂರಿ ಮತ್ತು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸಾವಿರಾರು ಕಲಾಭಿಮಾನಿಗಳು ಯಕ್ಷಗಾನದ ರಸದೌತಣವನ್ನು ಸವಿಯುತ್ತಿದ್ದಾರೆ. ಆಪ್ತಮಿತ್ರ ಬಳಗದ ಸೇವಾರ್ಥವಾಗಿ ನಡೆಯುವ ಈ ಯಕ್ಷಗಾನವು ಜಿಲ್ಲೆಯಾದ್ಯಂತ ಯಕ್ಷಗಾನ ಪ್ರೇಮಿಗಳನ್ನು ಕಾತರದಿಂದ ಕಾಯುವಂತೆ ಮಾಡುತ್ತಿದೆ. ಆದ್ದರಿಂದ ಎಲ್ಲಾ ವ್ಯವಸ್ಥೆಗಳನ್ನು ಸುಗಮಗೊಳಿಸಬೇಕು ಎಂದು ಪ್ರಮುಖರು ಅಭಿಪ್ರಾಯ ಹಂಚಿಕೊಂಡರು. ಊಟೋಪಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಉಪ ಸಮಿತಿಗಳನ್ನು ರಚಿಸಿ ವ್ಯವಸ್ಥಿತ ರೀತಿಯಲ್ಲಿ ‘ಮೂರ್ನಾಡು ಯಕ್ಷೋತ್ಸವ’ವನ್ನು ಯಶಸ್ವಿಗೊಳಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಆಪ್ತಮಿತ್ರ ಬಳಗದ ವಿನಯ್ ಕಗ್ಗೋಡ್ಲು, ವಾಸು ಹೊದ್ದೂರು, ನವೀನ್ ಮೂರ್ನಾಡು, ರಮೇಶ್ ಕಿಗ್ಗಾಲು, ಅಶ್ವಥ್ ರೈ ಬಾಡಗ, ಜಿತಿನ್ ಕಬಡಕೇರಿ, ಜಯಂತ್ ಚೆಟ್ಟಿಮಾಡ, ಗಿರೀಶ್ ರೈ, ಮೋಹನ್ ಪೂಜಾರಿ, ಕುಶನ್ ರೈ, ಚಂಗಪ್ಪ, ವಿಶ್ವನಾಥ್, ಚಂದ್ರಶೇಖರ್ ಕುಲಾಲ್, ಸುಂದರ್, ಪುರುಷೋತ್ತಮ್ ಕುಲಾಲ್ ಹೆಮ್ಮಾಡು, ತನ್ಮಯ್ ಕುಲಾಲ್, ಧ್ಯಾನಿಕ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.











