




ಮಡಿಕೇರಿ ಏ.4 NEWS DESK : ನಗರದ ಕನ್ನಿಕಾ ಬಡಾವಣೆಯಲ್ಲಿರುವ ಲಿಟ್ಲ ಪ್ಲವರ್ ವಿದ್ಯಾಸಂಸ್ಥೆಯಲ್ಲಿ ಚಿಣ್ಣರ ಮೇಳ/ ಬೇಸಿಗೆ ಶಿಬಿರಕ್ಕೆ ಚಾಲನೆ ದೊರೆಯಿತು. ಲಿಟ್ಲ ಪ್ಲವರ್ ಸಂಸ್ಥೆಯಲ್ಲಿ ಮಕ್ಕಳ ಕ್ರೀಯಾಶೀಲತೆ ಮತ್ತು ಸೃಜನಶೀಲತೆಗೆ ಒತ್ತು ನೀಡಲಾಗುತ್ತಿದೆ ಎಂದು ಪ್ರಾಂಶುಪಾಲರಾದ ಸುನಿತಾ ಪ್ರೀತು ತಿಳಿಸಿದ್ದಾರೆ. ಬೇಸಿಗೆ ಅವಧಿಯಲ್ಲಿ ಮಕ್ಕಳಿಗೆ ಒಂದರಿಂದ ಎರಡು ತಿಂಗಳ ಕಾಲ ರಜೆ ಇದ್ದು, ಮಕ್ಕಳು ಓದಿನ ಜೊತೆಗೆ ಕ್ರೀಯಾಶೀಲತೆ ಮತ್ತು ಸೃಜನಶೀಲತೆಗೆ ಒತ್ತು ನೀಡುವಲ್ಲಿ ಲಟ್ಲ ಪ್ಲವರ್ ಸಂಸ್ಥೆ ಮುಂದಾಗಿದೆ ಎಂದು ತಿಳಿಸಿದರು. ಮಕ್ಕಳಿಗೆ ಚಿತ್ರಕಲೆಯ ಮೂಲಕ ಕಲಿಕಾ ಅಭಿವೃದ್ಧಿ ಹೆಚ್ಚಿಸುವುದು ಅತೀ ಮುಖ್ಯವಾಗಿದೆ. ಜೊತೆಗೆ ಆಟದ ಮೂಲಕ ಪಾಠವನ್ನು ಕಲಿಯಲು ಸಲಹೆ, ಮಾರ್ಗದರ್ಶನ ಮಾಡಲಾಗುತ್ತದೆ ಎಂದು ವಿವರಿಸಿದರು. ಲಿಟ್ಲ ಪ್ಲವರ್ ಸಂಸ್ಥೆಯಲ್ಲಿ 7ನೇ ತರಗತಿವರೆಗೆ ನಿರಂತರ ಕಲಿಕೆಯ ಮಕ್ಕಳ ಪ್ರಗತಿಗೆ ಪ್ರೇರೇಪಣೆ ನೀಡಲಾಗುತ್ತಿದೆ ಎಂದು ಸುನಿತಾ ಪ್ರೀತು ತಿಳಿಸಿದರು.ನಿವೃತ್ತ ಪೌರಾಯುಕ್ತರಾದ ಬಿ.ಬಿ.ಪುಷ್ಪಾವತಿ ಅವರು ಮಾತನಾಡಿ ಮಕ್ಕಳ ಜೊತೆ ಬೆರೆಯುವುದು ಹೂವಿನ ಜೊತೆ ಆಟವಾಡಿದಂತಾಗುತ್ತದೆ. ಆದ್ದರಿಂದ ಮಕ್ಕಳ ಕ್ರೀಯಾಶೀಲತೆ ಮತ್ತು ಸಂವೇದನಾ ಶೀಲತೆ ಹೆಚ್ಚಿಸಲು ಲಿಟ್ಲ ಪ್ಲವರ್ ವಿದ್ಯಾ ಸಂಸ್ಥೆಯಲ್ಲಿ ಬೇಸಿಗೆ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು. ಕನ್ನಿಕಾ ಬಡಾವಣೆಯಲ್ಲಿ ಲಿಟ್ಲ ಪ್ಲವರ್ ಶಾಲೆ ಇರುವುದು ಸಂತಸ ತಂದಿದೆ. ಲಿಟ್ಲ ಪ್ಲವರ್ ಶಾಲೆಯಲ್ಲಿ ಉತ್ತಮ ಶಿಕ್ಷಣ ಪಡೆಯುವುದರ ಜೊತೆಗೆ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಳ್ಳಲು ಚಿಣ್ಣರ ಮೇಳ ಸಹಕಾರಿಯಾಗಲಿದೆ ಎಂದು ಅವರು ಪ್ರತಿಪಾದಿಸಿದರು. ಲಿಟ್ಲ ಪ್ಲವರ್ ವಿದ್ಯಾಸಂಸ್ಥೆಗೆ ಕೈಲಾದಷ್ಟು ಸಹಕಾರ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಸಂಸ್ಥೆಯ ವಿಶೇಷ ಶಿಕ್ಷಣ ಮಾರ್ಗದರ್ಶಕರಾದ ಮಾಳವಿಕ ಅವರು ಮಾತನಾಡಿ ಆಧುನಿಕ ಯುಗದಲ್ಲಿ ಮಾಹಿತಿ ಶಿಕ್ಷಣ ಅತ್ಯಗತ್ಯವಾಗಿ ಬೇಕಿದೆ. ಆ ನಿಟ್ಟಿನಲ್ಲಿ ಲಟ್ಲ ಪ್ಲವರ್ ವಿದ್ಯಾಸಂಸ್ಥೆಯಿಂದ ಚಿಣ್ಣರ ಮೇಳ ಆಯೋಜಿಸಲಾಗಿದೆ ಎಂದರು. ಶಿಕ್ಷಕರಾದ ಶ್ವೇತಾ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಆಟ ಪಾಠ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಮಕ್ಕಳ ಕಲಿಕೆ ನಿರಂತರವಾಗಿರಬೇಕು. ಜೊತೆಗೆ ಮಕ್ಕಳು ಕ್ರೀಡೆ, ಕಲೆ ಹಾಗೂ ಸಂಗೀತದಲ್ಲಿಯೂ ತೊಡಗಿಸಿಕೊಳ್ಳುವಂತಾಗಬೇಕು ಎಂದರು. ಲಿಟ್ಲ ಪ್ಲವರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಜಾನಪದ ನೃತ್ಯ ಪ್ರದರ್ಶಿಸಲು, ಪ್ರಾಣಿ, ಪಕ್ಷಿಗಳ ಬಗ್ಗೆ ಮಾಹಿತಿ ನೀಡಿದರು. ಕುವೆಂಪು, ಪುರಂದರ ದಾಸರು, ಸ್ವಾಮಿ ವಿವೇಕಾನಂದ ಇತರ ಗಣ್ಯರ ವ್ಯಕ್ತಿ ಪರಿಚಯ ಕುರಿತು ಮಾತನಾಡಿದ್ದು ಗಮನ ಸೆಳೆಯಿತು.