





ಮಡಿಕೇರಿ ಏ.5 NEWS DESK : ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂ ಅವರ 118ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ವಿರಾಜಪೇಟೆಯ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿ, ದಿವಂಗತ ಮಾಜಿ ಉಪ ಪ್ರಧಾನಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಶಾಸಕರು, ಡಾ.ಜಗಜೀವನ್ ರಾಮ್ ರವರು ಬಡವರ, ಹಿಂದುಳಿದ ವರ್ಗದವರ ಹಾಗೂ ದಲಿತರ ಕಲ್ಯಾಣಕ್ಕಾಗಿ ಹೋರಾಡಿದ ಒಬ್ಬ ರಾಷ್ಟ್ರ ನಾಯಕ. ಸ್ವಾತಂತ್ರ ಹೋರಾಟದಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಇವರು, ದೇಶದಲ್ಲಿ ಹಸಿರು ಕ್ರಾಂತಿ ತರುವ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣವಾಗಬೇಕೆಂದು ಹೋರಾಡಿದ ಮುತ್ಸದಿ ರಾಜಕಾರಣಿ. ಹಲವಾರು ಕ್ರಾಂತಿಕಾರಿ ಯೋಜನೆಗಳೊಂದಿಗೆ ಸಮಾಜಮುಖಿಯಾಗಿ ಕೆಲಸ ಮಾಡಿದ ಇವರು ನಮ್ಮೆಲ್ಲರಿಗೂ ಆದರ್ಶಪ್ರಾಯರು ಎಂದು ಬಣ್ಣಿಸಿದರು. ಈ ಸಂದರ್ಭ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ವಿರಾಜಪೇಟೆ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಪುರಸಭೆ ಸದಸ್ಯರುಗಳು ಮತ್ತು ಅಧಿಕಾರಿ ವರ್ಗದವರು ಹಾಗೂ ಪ್ರಮುಖರು ಉಪಸಿತರಿದ್ದರು.