





ಮಡಿಕೇರಿ ಏ.5 NEWS DESK : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಕೊಡಗು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿನಾಕಾರಣ ಎಫ್‍ಐಆರ್ ದಾಖಲಿಸಿ ಮಾನಸಿಕ ಕಿರುಕುಳ ನೀಡಿದ ಪರಿಣಾಮ ಅಮಾಯಕ ಯುವಕ ವಿನಯ್ ಸಾವನ್ನಪ್ಪಿದ್ದಾರೆ. ಇದು ವಿಷಾದನೀಯ ಮತ್ತು ಖಂಡನೀಯ. ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಹಿಂದೂ ಮುಖಂಡ ಕುಟ್ಟಪ್ಪ ಹಾಗೂ ಡಿವೈಎಸ್‍ಪಿ ಗಣಪತಿ ಸಾವನ್ನಪ್ಪಿದ್ದರು. ಇದೀಗ ಬಿಜೆಪಿ ಕಾರ್ಯಕರ್ತ ವಿನಯ್ ಸಾವಿಗೆ ಶರಣಾಗಿದ್ದಾರೆ, ಈ ಬೆಳವಣಿಗೆಗಳಿಗೆ ಕಾಂಗ್ರೆಸ್ ಸರ್ಕಾರದ ದುರಾಡಳಿತವೇ ಕಾರಣ ಎಂದು ಆರೋಪಿಸಿದ್ದಾರೆ. ವಿನಯ್ ಕುಟುಂಬಕ್ಕೆ ನ್ಯಾಯ ಸಿಗಬೇಕಾದರೆ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ರಾಜ್ಯದ ತನಿಖಾ ಸಂಸ್ಥೆಗಳಿಂದ ನ್ಯಾಯ ಸಿಗುವ ವಿಶ್ವಾವಿಲ್ಲ. ಕೊಡಗು ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಚಿಗುರೊಡೆದಿರುವುದು ಮತ್ತು ರಾಜಕೀಯ ಪ್ರೇರಿತ ಕೇಸ್ ದಾಖಲಿಸಿ ಮಾನಸಿಕ ಕಿರುಕುಳ ನೀಡುತ್ತಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿನಯ್ ಸಾವಿಗೆ ಶರಣಾಗುವ ಮೊದಲು ಕೆಲವರ ಹೆಸರುಗಳನ್ನು ಉಲ್ಲೇಖ ಮಾಡಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದೀಗ ಪೊಲೀಸರು ಒಬ್ಬರ ವಿರುದ್ಧ ಮಾತ್ರ ಎಫ್‍ಐಆರ್ ದಾಖಲಿಸಿರುವ ಕುರಿತು ಮಾಹಿತಿ ಇದ್ದು, ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆಗೆ ಒಳಪಡಿಸಬೇಕು. ತನಿಖೆ ಮುಗಿಯುವವರೆಗೆ ಜಿಲ್ಲೆಯ ಇಬ್ಬರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇದೀಗ ವಿನಯ್ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ರೂ.50 ಲಕ್ಷ ಪರಿಹಾರ ಘೋಷಿಸಬೇಕು ಮತ್ತು ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯಿಸಿದ್ದಾರೆ. ವಿನಯ್ ಅವರ ಸಾವಿಗೆ ಸಂತಾಪ ಸೂಚಿಸುವುದರೊಂದಿಗೆ ಕುಟುಂಬಕ್ಕೆ ಧೈರ್ಯ ತುಂಬುವುದಾಗಿ ತಿಳಿಸಿದ್ದಾರೆ.