





ಕುಶಾಲನಗರ ಏ.5 NEWS DESK : ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಲು ಹಾಗೂ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಲು ನಮ್ಮ ತಂಡ ವಿದ್ಯಾರ್ಥಿ ನ್ಯಾಯ ಜಾತ್ರೆ ಎಂಬ ಆಂದೋಲನ ಆರಂಭಿಸಿದೆ ಎಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ವಿತ್ ಕಟೀಲ್ ಹೇಳಿದರು.ಪಟ್ಟಣದ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ನ್ಯಾಯ ಯಾತ್ರೆ ಎಂಬ ಆಂದೋಲನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರ ಹಾಗೂ ರಕ್ಷಣೆಗಾಗಿ ಕರ್ನಾಟಕ ವಿದ್ಯಾರ್ಥಿ ಹಿತ ಮಸೂದೆ ಜಾರಿಗೆ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು. ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ, ಸಮರ್ಪಕ ವಿದ್ಯಾರ್ಥಿ ವೇತನ ವಿತರಣೆ, ಹಾಸ್ಟೆಲ್ ವ್ಯವಸ್ಥೆಯ ಸುಧಾರಣೆ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗಾವಕಾಶಗಳ ಹೆಚ್ಚಳ,ಡ್ರಗ್ಸ್ ಮತ್ತು ರ್ಯಾಗಿಂಗ್ ಪಿಡುಗು ನಿರ್ಮೂಲನೆ, ವಿದ್ಯಾರ್ಥಿ ನಿಯರ ಸುರಕ್ಷತೆ,ಸರ್ಕಾರಿ ವಿದ್ಯಾಸಂಸ್ಥೆಗಳ ಬಲವರ್ಧನೆ ಹಾಗೂ ಪೇಪರ್ ಲೀಕ್ ತಡೆಗಟ್ಟುವಿಕೆ ಇನ್ನಿತರ ಪ್ರಮುಖ ವಿಷಯಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗಿದೆ ಎಂದರು. ಕೊಡಗು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ, ಕೊಡಗು ವಿವಿ ಕುಲಪತಿ,ಪರೀಕ್ಷಾಂಗ ಕುಲಸಚಿವರು ಅವರನ್ನು ಭೇಟಿ ಮಾಡಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಗಳ ಬಗ್ಗೆ ಚರ್ಚೆ ನಡೆಸಿದ್ದೇವೆ.ವಿದ್ಯಾರ್ಥಿ ಸಮುದಾಯದ ಪರವಾಗಿ ಹಾಗೂ ಅವರ ಹಕ್ಕುಗಳಿಗಾಗಿ ಹೋರಾಡಲು ನಮ್ಮ ಈ ಹೋರಾಟ ಮುಂದುವರಿಯುತ್ತದೆ ಎಂದರು. ನಮ್ಮ ಈ ಆಂದೋಲನಕ್ಕೆ ಎಲ್ಲ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ನಾಗರಿಕರು ಪ್ರತಿಯೊಬ್ಬರೂ ಬೆಂಬಲ ನೀಡಬೇಕೆಂದು ಎಂದು ಮನವಿ ಮಾಡಿದರು. ಈ ಸಂದರ್ಭ ರಾಷ್ಟ್ರೀಯ ಸಂಯೋಜಕ ಹೃತಿಕ್ ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮನೀಶ್ ಜಿ. ರಾಜ್,ಶಿವಕುಮಾರ್, ಎನ್.ಎಸ್.ಯು.ಐ ಮಾಜಿ ಅಧ್ಯಕ್ಷ ತ್ರೀನೇಶ್, ಉಪಾಧ್ಯಕ್ಷ ಕಾರ್ತಿಕ್ ಪಾಲ್ಗೊಂಡಿದ್ದರು.