





ಮಡಿಕೇರಿ ಏ.5 NEWS DESK : ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ (ಮದ್ಯ ಮಾರಾಟಗಾರರ ಒಕ್ಕೂಟ) ಜಿಲ್ಲಾ ಘಕಟದ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು. ನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಅಸೋಸಿಯೇಷನ್ ಪ್ರಮುಖರು ಹಾಗೂ ಕಾರ್ಯಕರ್ತರು ಬೇಡಿಕೆ ಈಡೇರಿಸುವಂತೆ ಘೋಷಣೆಗಳನ್ನು ಕೂಗಿ ಸರಕಾರವನ್ನು ಒತ್ತಾಯಿಸಿ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಪತರ ಸಲ್ಲಿಸಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಗುಮ್ಮಟಿರ ಕಿಲನ್ ಗಣಪತಿ ಮಾತನಾಡಿ, ಮದ್ಯ ಸನ್ನದುದಾದರರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ಅತೀ ಹೆಚ್ಚು ಆದಾಯ ನೀಡುವ ಮದ್ಯ ಮಾರಾಟಗಾರರ ಹಿತವನ್ನು ಸರಕಾರ ಕಾಪಾಡಬೇಕಾಗಿದೆ. ಪ್ರಸ್ತುತ ಶೇ.10 ಲಾಭಾಂಶ ಮಾರಾಟಗಾರರಿಗೆ ದೊರೆಯುತ್ತಿದ್ದು, ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಟ ಶೇ. 20 ಲಾಭಾಂಶವನ್ನು ಹೆಚ್ಚಿಸಬೇಕು, ಹೆಚ್ಚುವರಿ ಅಬಕಾರಿ ಶುಲ್ಕ ಕಡಿಮೆಮಾಡಬೇಕು, ಯಾವುದೇ ಕಾರಣಕ್ಕೂ ಸನ್ನದು ಶುಲ್ಕವನ್ನು ಹೆಚ್ಚಿಸಬಾರದು, ಕೆಲವೊಂದು ಸನ್ನದುಗಳನ್ನು ಹರಾಜು ಮಾಡುವ ಪ್ರಸ್ತಾಪ ಸರಕಾರದ ಮುಂದಿದ್ದು, ಇದನ್ನು ಯಾವುದೇ ಕಾರಣಕ್ಕೂ ಮಾಡಬಾರದೆಂದು ಆಗ್ರಹಿಸಿದರು. ಸಿಎಲ್-2 ಬಾರ್‍ಗಳಲ್ಲಿ ಷರತ್ತು ಸಡಿಲಿಕೆಯ ಅಗತ್ಯತೆಯಿದೆ. ಇಲ್ಲಿ ತಯಾರಿಸಿದ ಆಹಾರಗಳನ್ನು ನೀಡಲು ಅವಕಾಶ ನೀಡಬೇಕು, ಕಾನೂನು ಬಾಹಿರ ವ್ಯವಹಾರ ನಡೆದರೆ ಕಠಿಣ ಕ್ರಮಕೈಗೊಳ್ಳಲಿ ಎಂದು ಅವರು, ಅಬಕಾರಿ ಕಾಯಿದೆ ಕಲಂ 29ನ್ನು ಪುನರ್ ವಿಮರ್ಶಿಸಿ ತಿದ್ದುಪಡಿಗೊಳಿಸಬೇಕೆಂದು ಮನವಿ ಮಾಡಿದರು. ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಬಾಬು ನಾಯ್ಡು, ಕುಞಂಡ ಜಗದೀಶ್, ಸಹ ಕಾರ್ಯದರ್ಶಿ ಹೆಚ್.ಪಿ.ಪ್ರದೀಪ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಪೈಕೇರ ಮನೋಹರ್, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಕಡೇಮಾಡ ಅಪ್ಪಣ್ಣ, ಪ್ರಮುಖರಾದ ವಾಟೇರಿರ ವೀರಜ್ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.